

ರಾಯಚೂರು: ತಿರುಮಲ ತಿರುಪತಿ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರಸ್ವಾಮಿ ಮಠದ ನಡುವೆ ಅವಿನಾಭಾವ ಸಂಬಂಧವಿದ್ದು, ಇಂದಿಗೂ ಉಳಿಸಿಕೊಂಡು ಬರಲಾಗಿದೆ ಎಂದು ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 425ನೇ ವರ್ಧಂತಿ ಮಹೋತ್ಸವ ನಿಮಿತ್ತ ಟಿಟಿಡಿಯಿಂದ ತರಲಾಗಿದ್ದ ಶೇಷವಸ್ತ್ರವನ್ನು ಸೋಮವಾರ ರಾಯರ ಬೃಂದಾವನಕ್ಕೆ ಅರ್ಪಿಸಿದ ನಂತರ ಆಶೀರ್ವಚನ ನೀಡಿದರು. 16 ವರ್ಷಗಳಿಂದ ರಾಯರ ವರ್ಧಂತಿ ಮಹೋತ್ಸವದಂದು ಪ್ರಸಾದ ರೂಪದಲ್ಲಿ ಶೇಷವಸ್ತ್ರವನ್ನು ತರಲಾಗುತ್ತಿದೆ.
ತಿರುಪತಿಯಲ್ಲಿ ಟಿಟಿಡಿಯಿಂದ ಶ್ರೀಮಠಕ್ಕೆ ನೀಡಲಾಗಿರುವ ಭೂಮಿಯಲ್ಲಿ ರಾಯರ ಮೃತ್ತಿಕಾ ಬೃಂದಾವನ ನಿರ್ಮಾಣ ಮಾಡಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ವಸತಿ ನಿಲಯ ಹಾಗೂ ಸಭೆ, ಸಮಾರಂಭ ನಡೆಸಲು ಸಭಾಂಗಣವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು. ಇದಕ್ಕೂ ಮುಂದೆ ಟಿಟಿಡಿಯ ಸಹಾಯಕ ಆಡಳಿತಾಧಿಕಾರಿ ಧರ್ವರೆಡ್ಡಿ ತಂದ ಶೇಷವಸ್ತ್ರವನ್ನು ಮಂಗಳ ವಾದ್ಯಗಳ ಮೂಲಕ ಬರಮಾಡಿಕೊಂಡ ಶ್ರೀಗಳು, ಅದನ್ನು ತಲೆ ಮೇಲೆ ಹೊತ್ತುಕೊಂಡು ಹೋಗಿ ರಾಯರ ಬೃಂದಾವನಕ್ಕೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಸಹಾಯಕ ವ್ಯವಸ್ಥಾಪಕ ರಾದ ಎಸ್.ಕೆ.ಶ್ರೀನಿವಾಸ, ಐ.ಪಿ.ನರಸಿಂಹಾ ಚಾರ್, ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್.ವಾದಿರಾಜಾಚಾರ್, ವಿದ್ವಾನ್ ಗೌತಮಾಚಾರ್ ಉಪಸ್ಥಿತರಿದ್ದರು.
ದೇಶಾದ್ಯಂತ ಪಾದುಕಾ ರಥಯಾತ್ರೆ: ಮುಂದಿನ ವರ್ಷ ರಾಯರ ಪಟ್ಟಾಭಿಷೇಕದ 400ನೇ ಮಹೋತ್ಸವ ಹಾಗೂ 350ನೇ ಆರಾಧನಾ ಮಹೋತ್ಸವ ನಿಮಿತ್ತ ದೇಶಾದ್ಯಂತ ರಾಯರ ಪಾದುಕಾ ರಥಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ವರ್ಷವಿಡೀ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ವಿವಿಧ ಭಾಷೆಗಳಲ್ಲಿ ರಾಯರ ಗ್ರಂಥಗಳ ಅನುವಾದ, ಶಾಖಾ ಮಠ ಮತ್ತು ಗೋಶಾಲೆಗಳ ಆರಂಭ, ವೈದ್ಯಕೀಯ ತಪಾಸಣೆ ಶಿಬಿರಗಳನ್ನು ನಡೆಸಲಾಗá-ವುದು ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಪುಷ್ಕರ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ತುಂಗಭದ್ರಾ
ನದಿ ತೀರದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಸ್ನಾನಘಟ್ಟ ನಿರ್ವಿುಸಲಾಗುವುದು. ರಾಯಚೂರಿನ ಸ್ನಾತಕೋತ್ತರ ಕೇಂದ್ರದಲ್ಲಿರುವ ದಾಸ ಸಾಹಿತ್ಯ ಅಧ್ಯಯನ ಪೀಠಕ್ಕೆ ಅನುದಾನ ನೀಡುವಂತೆ ಉನ್ನತ ಶಿಕ್ಷಣ ಸಚಿವ, ಗುಲ್ಬರ್ಗ ವಿವಿ ಅಧಿಕಾರಿ ಜತೆ ಮಾತನಾಡಲಾಗಿದೆ. ಮಠದ ವತಿಯಿಂದ ಆರ್ಥಿಕ ಸಹಕಾರ ನೀಡಲಾಗá-ವುದು ಎಂದರು.
ನಾದಹಾರ ಸಮರ್ಪಣೆ
ರಾಯರ ವರ್ಧಂತಿ ಮಹೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಚೆನ್ನೈನ ನಾದಹಾರಂ ಟ್ರಸ್ಟ್ನಿಂದ 200ಕ್ಕೂ ಹೆಚ್ಚು ಸಂಗೀತ ವಿದ್ವಾಂಸರು ಸಂಗೀತದ ಮೂಲಕ ರಾಯರಿಗೆ ಭಕ್ತಿ ಸಮರ್ಪಣೆ ಮಾಡಿದರು. ಕಳೆದ 16 ವರ್ಷಗಳಿಂದ ವಿದ್ವಾನ್ ಗಣೇಶನ್ ನೇತೃತ್ವದಲ್ಲಿ ನಾದಹಾರಂ ಹೆಸರಿನಲ್ಲಿ ಸಂಗೀತ ಸೇವೆ ಸಲ್ಲಿಸುತ್ತಾ ಬಂದಿರುವ ಟ್ರಸ್ಟ್ ಸದಸ್ಯರು ಶ್ರೀಮಠದ ಪ್ರಾಕಾರದಲ್ಲಿ ನಿರಂತರವಾಗಿ ಐದು ಗಂಟೆಗಳ ಕಾಲ ಶಾಸ್ತ್ರೀಯ ಹಾಡುಗಾರಿಕೆ ಹಾಗೂ ವಾದ್ಯ ಮೇಳದೊಂದಿಗೆ ಸಂಗೀತ ಪ್ರೀಯ ರಾಯರಿಗೆ ಸಂಪ್ರೀತಗೊಳಿಸಿದರು.