ಭಾರತೀಯರ ಕಣ ಕಣದಲ್ಲೂ ಭಗವಂತ ಇದ್ದಾನೆ : ಸುತ್ತೂರು ಶ್ರೀ

sosale mutt
Published on

ಮೈಸೂರು: ದೇಶ ಆಧ್ಮಾತ್ಮಿಕವಾಗಿ ಸಂಪದ್ಭರಿತವಾಗಿದ್ದು, ಆಧ್ಯಾತ್ಮಿಕತೆಯ ಮೂಲಕ ದೇಶ ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಜೆ.ಪಿ.ನಗರದ ಶ್ರೀ ವಿಠಲಧಾಮದ ಆವರಣದಲ್ಲಿ ಶ್ರೀ ವ್ಯಾಸರಾಜಮಠ(ಸೋಸಲೆ), ಶ್ರೀವ್ಯಾಸತೀರ್ಥ ವಿದ್ಯಾಪೀಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀಮನ್ನಾೃಯಸುಧಾಮಂಗಳ ಮಹೋತ್ಸವ ಮತ್ತು ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಭಾರತೀಯರ ಕಣ ಕಣದಲ್ಲೂ ಭಗವಂತ ಇದ್ದಾನೆ. ಭಗವಂತ ಮತ್ತು ಜನರ ನಡುವೆ ದೊಡ್ಡ ನಂಬಿಕೆ ಇದೆ. ಮಹರ್ಷಿಗಳು, ಆಚಾರ್ಯರು ಹೇಳಿರುವಂತೆ ಎಲ್ಲರೂ ಭಗವಂತನ ಮಕ್ಕಳು. ಬಸವಣ್ಣ ಹೇಳಿದಂತೆ ಎಲ್ಲರೂ ನಮ್ಮವರೇ ಅಂತ ಭಾವಿಸಿದರೆ ಸವಾಜ ಉತ್ತಮ ದಿಕ್ಕಿನಲ್ಲಿ ಸಾಗುತ್ತದೆ. ಪ್ರತಿಯೊಬ್ಬರು ಭಗವಂತನಲ್ಲಿ ನಂಬಿಕೆ ಇಡಬೇಕು. ನಂಬಿಕೆ ಇದ್ದರೆ ಭಗವಂತ ಒಲಿಯುತ್ತಾನೆ. ದೇವಸ್ಥಾನಕ್ಕೆ ಹೋದರೆ ದೇವರು ನಮಗೆ ವರ ನೀಡುತ್ತಾನೋ ಇಲ್ಲವೋ ಎಂಬ ಅನುಮಾನದಿಂದ ಹೋಗದೆ ಭಕ್ತಿಯಿಂದ ಪ್ರಾರ್ಥಿಸಿದರೆ ನಿಜವಾಗಿಯೂ ವರ ದೊರೆಯುತ್ತದೆ ಎಂದರು.

ಹಂಪಿಯ ಸುವರ್ಣ ಯುಗವನ್ನು ಜ್ಞಾಪಿಸುವ ರೀತಿಯಲ್ಲಿ ವ್ಯಾಸರಾಜ ಮಠ ಸೇವಾ ಕಾರ್ಯ ಮಾಡಿಕೊಂಡು ಬಂದಿದೆ. ಇದು ನಾಡಿನ ಪ್ರಮುಖ ಮಠವಾಗಿದೆ. ಸುತ್ತೂರು ಮಠ ಮತ್ತು ಸೋಸಲೆ ಮಠಕ್ಕೆ ಅವಿನಾಭಾವ ಹೊಂದಿದೆ ಎಂದು ಹೇಳಿದರು.

ಶ್ರೀ ಸೋದೆಮಠದ ಶ್ರೀವಿಶ್ವವಲ್ಲಭತೀರ್ಥರು ಮಾತನಾಡಿ, ಆಧುನಿಕ ಕಾಲದಲ್ಲಿ ಬುದ್ಧಿವಂತಿಕೆಯ ಭ್ರಮೆಯನ್ನು ಹೊಂದಿದ್ದೇವೆ. ಧರ್ಮದ ಶ್ರದ್ಧೆ ಕೊರತೆ ಕಾಣುತ್ತಿದ್ದೇವೆ. ನಾನು, ನನ್ನದು ಎನ್ನುವ ಮೂಲಕ ಧರ್ಮದ ಹಾದಿಯಲ್ಲಿ ಸಾಗದೆ ಅವನತಿ ಹೊಂದುತ್ತಿದ್ದೇವೆ. ಅತಿ ಬುದ್ಧಿವಂತಿಕೆ ದೊಡ್ಡ ಅಪಾಯವಾಗಿದೆ ಎಂದರು.

ಆರು ನೂರು ವರ್ಷಗಳ ಹಿಂದೆ ಹಿಂದೂ ಸಮಾಜವನ್ನು ಒಗ್ಗೂಡಿಸಿ ಮುನ್ನೆಡೆಸುವಲ್ಲಿ ವ್ಯಾಸರಾಜರ ಪಾತ್ರ ಅಪಾರವಾಗಿದೆ. ಪ್ರತಿಯೊಬ್ಬರು ವ್ಯಾಸರಾಜರ ಸ್ಮರಣೆ ಮಾಡಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದನ್ನು ಪಾಲಿಸಬೇಕು. ವ್ಯಾಸರಾಜರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ: ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀನಿವಾಸಾಚಾರ್ಯ ವರಖೇಡಿ ಅವರಿಗೆ ವೇದವ್ಯಾಸಾನುಗ್ರಹ ಪ್ರಶಸ್ತಿ, ಪೇಜಾವರ ಶ್ರೀಧಾಮದ ಆಡಳಿತಗಾರ ಎಚ್.ಎಂ.ಗುರುನಾಥ್‌ಗೆ ಶ್ರೀವ್ಯಾಸರಾಜಸೇವಾಧುರಂಧರ ಪ್ರಶಸ್ತಿ, ದಾಸಸಾಹಿತ್ಯ ಸಂಶೋಧಕಿ ವಿದುಷಿ ಡಾ.ಟಿ.ಎಸ್.ನಾಗರತ್ನಗೆ ಶ್ರೀಪುರಂದರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಭವ್ಯರಜತಸಿಂಹಾಸನದಲ್ಲಿ ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕ ದರ್ಬಾರ್ ನಡೆಸಲಾಯಿತು. ಆಕರ್ಷಕ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರಿವ್ಯಾಸರಾಜರಿಗೆ ವಿಶೇಷ ಅಲಂಕಾರ ವಾಡಿ ದರ್ಬಾರ್ ನಡೆಸಲಾಯಿತು.

ಈ ಸಂದರ್ಭ ಮಂತ್ರಾಲಯ ರಾಘವೇಂದ್ರ ಮಠದ ಶ್ರೀ ೀಸುಬುಧೇಂದ್ರತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ,ಮುಳಬಾಗಿಲು ಶ್ರೀಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ನಿರಂಜನಾಪುರಿ ಸ್ವಾಮೀಜಿ, ಪರಕಾಲಮಠದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲಮಹಾದೇಶಿಕ ಸ್ವಾಮೀಜಿ, ಅವಧೂತ ದತ್ತಪೀಠದ ಶ್ರೀದತ್ತ ವಿಜಯಾನಂದತೀರ್ಥರು, ಶ್ರೀಪಾದರಾಜಮಠದ ಶ್ರೀ ಸುಜಯನಿಧಿಶ್ರೀಪಾದರು, ಬಾಳಗಾರು ಮಠದ ಶ್ರೀ ಅಕ್ಷೋಭ್ಯರಾಮಪ್ರಿಯತೀರ್ಥ ಶ್ರೀಪಾದರು, ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜತೀರ್ಥರು, ಶ್ರೀಸೋದೆಮಠದ ಶ್ರೀ ವಿಶ್ವವಲ್ಲಭತೀರ್ಥರು, ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು, ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ, ತಿರುಪತಿ ತಿರುಮಲ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಧರ್ಮಾರೆಡ್ಡಿ, ಶ್ರೀ ವ್ಯಾಸರಾಜಮಠ ಸಲಹಾ ಸಮಿತಿ ಅಧ್ಯಕ್ಷ ಕೆ.ಜಯರಾಜ್, ಆಡಳಿತಾಧಿಕಾರಿ ಸಿ.ಎಸ್.ಸುರಂಜನ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net