

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ, ಗುಂಪುಗಾರಿಕೆ ಯಾವುದೂ ಇಲ್ಲ. ಜಗಳ ಇರುವುದು ಬಿಜೆಪಿಯಲ್ಲಿ. ಅವರಲ್ಲಿ ಐದು ಗುಂಪುಗಳಿವೆ. ತಮ್ಮ ಪಕ್ಷದಲ್ಲಿನ ಗುಂಪುಗಾರಿಕೆಯನ್ನು ಬಿಜೆಪಿ ನಾಯಕರು ಮೊದಲು ಸರಿಪಡಿಸಿಕೊಳ್ಳಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಬೇಕೆಂದು ಕೆಲವು ನಾಯಕರಿಗೆ ಆಸೆ ಇದೆ. ಈ ಬಗ್ಗೆ ಅವರು ಅಭಿಪ್ರಾಯ ಹೇಳಬಹುದು. ಆದರೆ, ಅಂತಿಮವಾಗಿ ಎಲ್ಲವನ್ನೂ ಹೈಕಮಾಂಡ್ ತೀರ್ವನಿಸಲಿದೆ. ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಬೇಕಾಗುತ್ತದೆ ಎಂದರು.
ನವೆಂಬರ್ ಕ್ರಾಂತಿ ಎಂಬುದು ಮಾಧ್ಯಮದವರ ಸೃಷ್ಟಿ. ಮುಖ್ಯಮಂತ್ರಿ ಸ್ಥಾನ ಬದಲಾಗುವುದಿಲ್ಲ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ನವೆಂಬರ್ನಲ್ಲಿ ಸಂಪುಟ ಪುನರ್ರಚನೆ ಆಗಲಿದೆ. ಹೊಸಮುಖಗಳಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. 3-4 ಬಾರಿ ಶಾಸಕರಾದವರಿಗೆ ಸಚಿವರಾಗಬೇಕು ಎಂಬ ಆಸೆ ಇರುವುದು ಸಹಜ. ಇದೆಲ್ಲವನ್ನೂ ಗಮನಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.