ಸಮಾಜದಲ್ಲಿ ಹೆಚ್ಚಿದ ಭ್ರಷ್ಟರು, ದುಷ್ಟರ ಆರ್ಭಟ

D.28-MDG-1P1 (1)
Published on

ಮೂಡಿಗೆರೆ: ಸಮಾಜಮುಖಿಯಾಗಿ ಜನರ ಕಷ್ಟ-ಕಾರ್ಪಣ್ಯಗಳಲ್ಲಿ ಪಾಲ್ಗೊಳ್ಳುವ ಸಂಘ-ಸಂಸ್ಥೆಗಳು ಹಾಗೂ ಪ್ರಾಮಾಣಿಕ ರಾಜಕಾರಣಿಗಳ ವಿರುದ್ಧ ಅನಗತ್ಯವಾಗಿ ಸಂಚು ರೂಪಿಸಿ ನಿಂದಿಸುವ ಶಕ್ತಿಗಳಿಂದಾಗಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಅಂತಹ ದುಷ್ಟರನ್ನು ಮಟ್ಟಹಾಕಿ ಪ್ರಾಮಾಣಿಕರನ್ನು ರಕ್ಷಿಸುವ ಶಕ್ತಿ ಜನರಿಗಿದೆ ಎಂದು ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ್‌ನ ಸದಸ್ಯ ಚಿಪ್ರಗುತ್ತಿ ಪ್ರಶಾಂತ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ತಾಲೂಕು ಮಟ್ಟದ ಸ್ವಸಹಾಯ ಗುಂಪು, ಪ್ರಗತಿ ಬಂಧು ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜನರೊಂದಿಗೆ ಬೆರೆತು ಒಳ್ಳೆಯದನ್ನು ಬಯಸುವ ರಾಜಕಾರಣಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸದಿಂದ ಪ್ರಾಮಾಣಿಕ ರಾಜಕಾರಣಿಗಳ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದರು.
ಸಮಾಜದ ಮುಖ್ಯವಾಹಿನಿಯಲ್ಲಿ ದುಷ್ಟರು ಮತ್ತು ಕಡು ಭ್ರಷ್ಟರ ಆರ್ಭಟ ಹೆಚ್ಚಾಗಿದೆ. ಇಂತಹ ಸಂಸ್ಕೃತಿಗೆ ಜನ ಮನ್ನಣೆ ನೀಡಬಾರದು. ಸಮಾಜಮುಖಿಯಾಗಿ ಬಡವರು ಮತ್ತು ನಿರ್ಗತಿಕರ ಪರವಾಗಿರುವ ರಾಜಕಾರಣಿ ಹಾಗೂ ಸಮಾಜಮುಖಿ ಚಿಂತನೆಯ ಸಂಘ-ಸಂಸ್ಥೆಗಳನ್ನು ಗೌರವಿಸಬೇಕು. ನಿರಂತರವಾಗಿ ಆರ್ಭಟಿಸುವ ದುಷ್ಟ ಕೂಟಕ್ಕೆ ಯಾರೊಬ್ಬರೂ ಸಹಕಾರ ನೀಡಬಾರದು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ದಂಪತಿಗಳು ಆರಂಭಿಸಿರುವ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವಾರು ಸವಲತ್ತುಗಳಿವೆ. ಅದನ್ನು ನೈಜ ಫಲಾನುಭವಿಗಳಿಗೆ ತಲುಪಿಸುತ್ತಿರುವ ಯೋಜನೆ ಪದಾಧಿಕಾರಿಗಳ ಶ್ರಮ ನಿಜಕ್ಕೂ ಮೆಚ್ಚುವಂಥದ್ದು. ಯೋಜನೆಯಿಂದ ನಿರಂತರವಾಗಿ ಅನೇಕ ಜನಪರ ಕಾರ್ಯಗಳು ನಡೆಯುತ್ತಿದೆ. ನೀರಾವರಿ, ರಸ್ತೆ, ಕುಡಿಯುವ ನೀರು, ಕೆರೆ ನಿರ್ಮಾಣ, ಗ್ರಾಮಕ್ಕೊಂದು ವನ, ಶಿಕ್ಷಣ, ಆರೋಗ್ಯ, ಮದ್ಯವರ್ಜನ ಶಿಬಿರ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಮಂಜುನಾಥ ಹೊಸಮನಿ, ತಾಲೂಕು ಯೋಜನಾಧಿಕಾರಿ ಪಿ.ಶಿವಾನಂದ, ಐಡಿಬಿಐ ಬ್ಯಾಂಕ್ ಪ್ರಬಂಧಕ ಅಭಿಲಾಶ್, ಶೌರ್ಯ ವಿಪತ್ತು ತಂಡದ ಪ್ರವೀಣ್ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net