ಆಂಬುಲೆನ್ಸ್​ ಇದ್ದರೂ ಚಾಲಕ ಇಲ್ಲ!

ambulamce
Published on

ಜಿ.ನಾಗರಾಜ್​ ಬೂದಿಕೋಟೆ

ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದ್ದು, ಕೇಂದ್ರದಲ್ಲಿನ ಆಂಬುಲೆನ್ಸ್​ಗೆ ಚಾಲಕರ ಕೊರತೆ ಇದ್ದು, ತುರ್ತು ಸಮಯದಲ್ಲಿ ಸೇವೆ ದೊರಕದೆ ಜನಸಾಮಾನ್ಯರು ಪರದಾಡುವ ಸ್ಥಿತಿ ನಿಮಾರ್ಣವಾಗಿದೆ.

ಈ ಕೇಂದ್ರ ವ್ಯಾಪ್ತಿಗೆ 96 ಗ್ರಾಮಗಳು ಒಳಪಡಲಿದ್ದು, ಸುಮಾರು 59 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಕೇಂದ್ರದ ವ್ಯಾಪ್ತಿಯಲ್ಲಿ ಇರುತ್ತಾರೆ. ಇಷ್ಟೂ ಜನಕ್ಕೆ ಅನಾರೋಗ್ಯ ಸಮಸ್ಯೆ ಎದುರಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ, ಬದಲಾಗಿ ಹತ್ತಿರದಲ್ಲೇ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸೇವೆ ನೀಡಲು ಮಾಗೊಂದಿ, ಗುಲ್ಲಹಳ್ಳಿ, ಅತ್ತಿಗಿರಿಕೊಪ್ಪ, ಹುಣಸನಹಳ್ಳಿ, ಕಾರಮಂಗಲ, ಸೂಲಿಕುಂಟೆ ಮತ್ತು ಹುಲಿಬೆಲೆ ಉಪ ಕೇಂದ್ರಗಳನ್ನು ತೆರೆಯಲಾಗಿದೆ.

ಆಸ್ಪತ್ರೆಗೆ ಒಂದು ಆಂಬುಲೆನ್ಸ್​ ಬೇಕೆಂದು ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬರಲಾಗಿತ್ತು. ಮನವಿಗೆ ಸ್ಪಂದಿಸಿದ ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಅವರು ಕೆಎಲ್​ಎಲ್​ಎಡಿ ನಿಧಿಯಡಿ ಆಂಬುಲೆನ್ಸ್​ ನೀಡಿದ್ದು, ಈಗ ಚಾಲಕನನ್ನೂ ನೇಮಕ ಮಾಡಲು ಮನವಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ನೇಮಿಸಿದ ಚಾಲಕರು ಹಗಲಿನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಾರೆ. ಜತೆಗೆ ಸರ್ಕಾರಿ ರಜೆಗಳು ಮತ್ತು ಭಾನುವಾರಗಳಂದು ಅವರಿಗೆ ರಜೆ ಇರುವುದರಿಂದ ಕೆಲಸಕ್ಕೆ ಹಾಜರಾಗುವುದಿಲ್ಲ. ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ ಸೇರಿ ಇತರೆ ಅವಘಡಗಳು ಸಂಭವಿಸುತ್ತವೆ. ಇದರಿಂದ ಗಾಯಾಳುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವಂತೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಹಿಂದೆ ಆಸ್ಪತ್ರೆಯಲ್ಲಿ ಇರುವ ಕಾಯಂ ಚಾಲಕರ ಜತೆಗೆ ಮತ್ತೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು 24 ಗಂಟೆಗಳ ಆಂಬುಲೆನ್ಸ್​ ಸೇವೆ ನೀಡಲಾಗುತ್ತಿತ್ತು. ಆದರೆ ಏಕಾಏಕಿ ಗುತ್ತಿಗೆ ಆಧಾರದ ಚಾಲಕರ ಸೇವೆ ನಿಲ್ಲಿಸಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಆದ್ದರಿಂದ ಸರ್ಕಾರ ಕೂಡಲೇ ಮತ್ತೊಬ್ಬ ಚಾಲಕರನ್ನು ನೀಡಬೇಕು. ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗ್ರಾಮಗಳು ಮತ್ತು ಜನಸಂಖ್ಯೆ ಹೆಚ್ಚಿದ್ದು, ರಾತ್ರಿ ವೇಳೆ ವೈದ್ಯರು ಇಲ್ಲದ ಕಾರಣ ಆರೋಗ್ಯ ಸಮಸ್ಯೆಗೆ ದೂರದ ತಾಲೂಕು ಆಸ್ಪತ್ರೆಗೆ ಹೋಗಬೇಕಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ 24 ಗಂಟೆ ವೈದ್ಯಕಿಯ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ.

ರಾತ್ರಿ ವೈದ್ಯರೇ ಇಲ್ಲ

ಕಳೆದೊಂದು ವಾರದಲ್ಲಿ ಅಪಘಾತ, ರಕ್ತದೊಂದಿಗೆ ವಾಂತಿ, ಎದೆ ನೋವು ಇತ್ಯಾದಿ ಪ್ರಕರಣಗಳು ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ವೈದ್ಯರ ಸೇವೆ ಇಲ್ಲದ ಕಾರಣ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕಳುಹಿಸಲು ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಬಂಧಿಕರು ಆಂಬುಲೆನ್ಸ್​ಗೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ರೋಗಿಯನ್ನು ಆಸ್ಪತ್ರೆಯಲ್ಲಿ ಕೂರಿಸಿಕೊಂಡು 108ಕ್ಕೆ ಕತ್ತಾರು ಬಾರಿ ಕರೆ ಮಾಡಿದರೂ ಆಂಬುಲೆನ್ಸ್​ ಬಾರದೆ ಇರುವುದರಿಂದ ಖಾಸಗಿ ವಾಸಹನಗಳಲ್ಲಿ ಕರೆದುಕೊಂಡು ಹೋದ ಹಲವು ನಿದರ್ಶನಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರರಲ್ಲಿ 24 ಗಂಟೆಗಳ ಹೆರಿಗೆ ಸೌಲಭ್ಯ ಇರುವುದರಿಂದ ಸುತ್ತಮುತ್ತಲಿನ ಗ್ರಾಮದವರು ಆಸ್ಪತ್ರೆಗೆ ಹೆರಿಗೆಗೆ ದಾಖಲಿಸುತ್ತಾರೆ. ಸುಗಮ ಹೆರಿಗೆಗೆ ಸಮಸ್ಯೆ ಆದರೆ ಅಥವಾ ಬೇರೆ ಯಾವುದಾದರೂ ಸಮಸ್ಯೆ ಎದುರಾದರೆ ಬಡ ಜನರು ಖಾಸಗಿ ಕಾರು ಅಥವಾ ಆಟೋಗಳನ್ನು ಕರೆತರಲಾಗುತ್ತಿದೆ.

"ಆಂಬುಲೆನ್ಸ್​ನ ಚಾಲಕರ ವಿಚಾರವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಇತರೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪಿಎಚ್​ಸಿಯನ್ನು ಸಿಎಚ್​ಸಿ ಆಗಿ ಮೇಲ್ದರ್ಜೆಗೇರಿಸುವುದು ಸರ್ಕಾರದ ಹಂತದಲ್ಲಿ ನಡೆಯಬೇಕಾಗುತ್ತದೆ."

- ಡಾ.ಸುನೀಲ್​, ತಾಲೂಕು ಆರೋಗ್ಯಾಧಿಕಾರಿ ಬಂಗಾರಪೇಟೆ

"ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ಆಂಬುಲೆನ್ಸ್​ ಚಾಲಕರ ಅವಶ್ಯ ಇದೆ. ಆದ್ದರಿಂದ ರಾತ್ರಿ ಕಾರ್ಯನಿರ್ವಹಿಸಲು ಚಾಲಕರನ್ನು ನೇಮಕ ಮಾಡಬೇಕು ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಮಕ್ಕಳ, ಸ್ತ್ರೀರೋಗ ತಜ್ಞರು ಸೇರಿ ಇತರೆ ವೈದ್ಯರನ್ನು ಸರ್ಕಾರ ನೇಮಕ ಮಾಡಬೇಕು."

- ವೈ.ಸಿ.ಗೋವಿಂದಪ್ಪ ಯಳೇಸಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net