ಪಕ್ಷಕ್ಕಾಗಿ ದುಡಿದವರಿಗೆ ವಿಫುಲ ಅವಕಾಶ

ಪಾಂಡವಪುರ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಸರ್ಕಾರದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಲಾಕ್
ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಪಾಂಡವಪುರ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ಸರ್ಕಾರದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
Published on

ಪಾಂಡವಪುರ: ಪಕ್ಷದ ಸಂಘಟನೆಗೆ ನಿಷ್ಠೆಯಿಂದ ದುಡಿದವರಿಗೆ ನಾಮ ನಿರ್ದೇಶನ ಸೇರಿದಂತೆ ವಿಫುಲ ಅವಕಾಶಗಳು ದೊರೆಯಲಿದ್ದು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮನವಿ ಮಾಡಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಂಬಂಧ ಅನುಷ್ಠಾನ ಸಮಿತಿ ರಚನೆಗಾಗಿ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳು ಜನರಿಗೆ ಪ್ರಾಮಾಣಿಕವಾಗಿ ತಲುಪಿದೆಯೇ ಅಥವಾ ಏನಾದರೂ ಲೋಪದೋಷವಾಗಿದೆಯೇ ಎಂಬುದನ್ನು ಮನೆ ಮನೆಗೆ ತೆರಳಿ ಪರಿಶೀಲಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ರಚಿಸಲು ತೀರ್ಮಾನ ಮಾಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೋಬಳಿವಾರು ನಿಷ್ಠಾವಂತ ಕಾರ್ಯಕರ್ತರನ್ನು ಸಮಿತಿಗೆ ಗುರುತಿಸಿ ಪಟ್ಟಿ ಸಿದ್ಧಪಡಿಸಿಕೊಡಬೇಕು ಎಂದು ತಿಳಿಸಿದರು.

ಸಚಿವರಿಗೆ ಘೇರಾವ್: ವಿಧಾನಸಭೆ ಚುನಾವಣೆ ಮುಗಿದು 7 ತಿಂಗಳು ಕಳೆದಿದೆ. ಈವರೆಗೂ ಪಕ್ಷದಿಂದ ಕೃತಜ್ಞತಾ ಸಭೆ ನಡೆಸಿಲ್ಲ. ಜತೆಗೆ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ನಾಮಿನಿ ಸೇರಿದಂತೆ ಯಾವುದೇ ಅಧಿಕಾರ ನೀಡಿಲ್ಲ. ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರ ಅವಶ್ಯಕತೆ ಬೇಕಿದೆ ಎಂದು ಅಸಮಾಧಾನ ಹೊರಹಾಕಿದರಲ್ಲದೇ, ಪಾಂಡವಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಾಡೆ ಕೃಷ್ಣೇಗೌಡ ಎಚ್ಚರಿಸಿದರು.

ಸಭೆಯಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಟೌನ್ ಅಧ್ಯಕ್ಷ ಕೆ.ಉಮಾಶಂಕರ್, ಪುರಸಭೆ ಮಾಜಿ ಅಧ್ಯಕ್ಷ ಹಾರೋಹಳ್ಳಿ ಡಿ.ಹುಚ್ಚೇಗೌಡ, ಕಾಂಗ್ರೆಸ್ ಮುಖಂಡರಾದ ಸಿದ್ದಲಿಂಗಯ್ಯ, ಎಂ.ಕೆ.ಸತ್ಯೇಂದ್ರಕುಮಾರ್, ಚಿಕ್ಕಬ್ಯಾಡರಹಳ್ಳಿ ಧರ್ಮಣ್ಣ, ಎಚ್.ಎನ್.ದಯಾನಂದ, ಹರಳಹಳ್ಳಿ ದಯಾನಂದ, ಶ್ಯಾದನಹಳ್ಳಿ ನರೇಂದ್ರಬಾಬು, ಮೋಹನ್ ಕುಮಾರ್, ಯೋಗಣ್ಣ, ಮಹ್ಮದ್ ಹನೀಫ್ (ಪಾಪು), ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಂತನಹಳ್ಳಿ ಬಸವರಾಜು ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net