

ಮದ್ದೂರು: ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೈಲೂರು ಗ್ರಾಮದಲ್ಲಿ ಹಲವು ತಿಂಗಳುಗಳಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ.
ತಾಲೂಕಿನಲ್ಲಿ ಭೀಕರ ಬರಗಾಲ ಬಂದು ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಂಕಷ್ಠ ಎದುರಾಗಿದೆ. ಆದರೂ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಇದು ಸರಿಯಲ್ಲ ಎಂದು ಇಲ್ಲಿಯ ಗ್ರಾಮಸ್ಥರು ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.
ಮಾರ್ಚ್ ತಿಂಗಳಿನಿಂದಲೂ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳು ಆಗುತ್ತಿದೆ. ಇಷ್ಟಾದರೂ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸದಸ್ಯರು ಇದರ ಬಗ್ಗೆ ಗಮನ ಹರಿಸದೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಇದರ ಜತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ವಿದ್ಯುತ್ ಪರಿವರ್ತಕಗಳು ಕೆಟ್ಟಿದೆ. ಆದರೂ ಇದುವರೆಗೂ ಸೆಸ್ಕ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ರೈತರು ಬೆಳೆ ಬೆಳೆಯಲು ಮತ್ತು ಕುಡಿಯುವ ನೀರಿಗೆ ತುಂಬಾ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಇಲ್ಲ ಎಂದು ಹೇಳುವ ಅಧಿಕಾರಿಗಳು: ಮದ್ದೂರು ತಾಲೂಕಿನಲ್ಲಿ 272 ಹಳ್ಳಿಗಳು ಇದ್ದು, ಇದರಲ್ಲಿ ಹೊಸಕೆರೆ, ಕರಡಕೆರೆ, ಕಾಡುಕೊತ್ತನಹಳ್ಳಿ, ಕೆ.ಶೆಟ್ಟಿಹಳ್ಳಿ, ಕೆಸ್ತೂರು, ಅಣ್ಣೂರು, ಆತಗೂರು, ಕಾರ್ಕಳ್ಳಿ, ಕೆ.ಹೊನ್ನಲಗೆರೆ, ಕೆ.ಬೆಳ್ಳೂರು ಸೇರಿದಂತೆ 42 ಗ್ರಾಮಗಳಲ್ಲಿರುವ ಬೋರ್‌ವೆಲ್‌ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ರೈತರು ಹಾಗೂ ಸಾರ್ವಜನಿಕರಿಂದ ಬೋರ್‌ವೆಲ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಕೂಲ ಕಲ್ಪಿಸಿ: ಮದ್ದೂರು ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಸುಮಾರು 6 ತಿಂಗಳ ಹಿಂದೆ ಉದ್ಘಾಟನೆಯಾಗಿತ್ತು. 3 ತಿಂಗಳು ಕಳೆದ ನಂತರ ಘಟಕ ಕೆಟ್ಟು ಹೋಯಿತು. ನೀರಿನ ಘಟಕವನ್ನು ದುರಸ್ತಿ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯ ಗ್ರಾಮಸ್ಥರು 2 ಕಿಮೀ ದೂರವಿರುವ ಕೊಪ್ಪಕ್ಕೆ ಹೋಗಿ ನೀರು ತರಬೇಕಾದ ದುಸ್ಥಿತಿ ಬಂದಿದೆ. ಶೀಘ್ರವಾಗಿ ಕುಡಿಯುವ ನೀರಿನ ಘಟಕ ಸರಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮದ ಮುಖಂಡ ಯೋಗೇಶ್ ಮನವಿ ಮಾಡಿದ್ದಾರೆ.
ಘಟಕ ಸರಿಪಡಿಸಿ: ಮದ್ದೂರು ತಾಲೂಕಿನಲ್ಲಿ ಒಟ್ಟು 110 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇದರಲ್ಲಿ 13 ಕ್ಕೂ ಹೆಚ್ಚು ದುರಸ್ತಿಗೊಂಡಿದೆ. ಇದರಿಂದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಇವುಗಳನ್ನು ಸರಿಪಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಮದ್ದೂರು ತಾಲೂಕಿನ ಕೆಲವು ಹಳ್ಳಿಗಳಲ್ಲಿ ಒಂದು ದಿನ ಬಿಟ್ಟು ದಿನ ನೀರು ಕೊಡುತ್ತಿದ್ದರೂ ಈಗ ಮಳೆ ಬಾರದ 3 ಅಥವಾ 4 ದಿನಗಳಿಗೊಮ್ಮೆ ನೀರು ಕೊಡುತ್ತಿದ್ದಾರೆ ಹಾಗೂ ಕಡಿಮೆ ಅವಧಿಯಲ್ಲಿ ನೀರು ಕೊಡುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ತೈಲೂರು ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸರಿಪಡಿಸುವ ಉದ್ದೇಶದಿಂದ ಖಾಸಗಿ ವ್ಯಕ್ತಿಯಿಂದ ಬೋರ್‌ವೆಲ್ ಬಾಡಿಗೆ ತೆಗೆದುಕೊಳ್ಳಲಾಗಿದೆ. ಶೀಘ್ರವಾಗಿ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ತಾಲೂಕಿನಲ್ಲೂ ಎಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ ಸ್ಥಳಕ್ಕೆ ಭೇಟಿ ನೀಡಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿ.ಆರ್.ಮಂಜುನಾಥ್ ತಾಪಂ ಇಒ ಮದ್ದೂರು
ತೈಲೂರು ಗ್ರಾಮಕ್ಕೆ ಗ್ರಾಪಂ ವತಿಯಿಂದ 5 ದಿನಕ್ಕೆ ಒಂದು ಬಾರಿ. ಪ್ರತಿ ಮನೆಗೆ 5 ಬಿಂದಿಗೆ ಮಾತ್ರ ನೀರು ಕೊಡುತ್ತಿದ್ದಾರೆ. ಅದು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ನೀರಿಗೆ ತುಂಬಾ ಸಮಸ್ಯೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವಾಗಿ ಈ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳದೆ ಹೋದರೆ ಗ್ರಾಮಸ್ಥರ ಜತೆಗೂಡಿ ತಾಪಂ ಹಾಗೂ ಸೆಸ್ಕ್ ಕಚೆರಿಗೆ ಮುತ್ತಿಗೆ ಹಾಕಿ ಹೋರಾಟ ರೂಪಿಸಲಾಗುವುದು.
ಅಶೋಕ್ ಯುವ ಮುಖಂಡ ತೈಲೂರು.