

ಮಡಿಕೇರಿ:
ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಮಾದಕ ವ್ಯಸನಿಗಳ ಜಾಲಕ್ಕೆ ಕಡಿವಾಣ ಹಾಕಲು ಕಟಿಬದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂಬಂಧ ೨೦೨೩ರಲ್ಲಿ ಒಟ್ಟು ೧೦೧ ಪ್ರಕರಣಗಳು ದಾಖಲಾಗಿದ್ದು, ಅಂದಾಜು ೨೫ ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರವಾಸಿ ತಾಣವಾಗಿ ದೇಶ-ವಿದೇಶದಲ್ಲಿ ಹೆಸರು ಮಾಡಿರುವ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪ್ರವಾಸೋದ್ಯಮದ ಬೆಳವಣಿಗೆ ಒಂದು ಕಡೆಯಲ್ಲಿ ಖುಷಿ ಕೊಟ್ಟರೆ, ಮತ್ತೊಂದು ಕಡೆ ಅಪಾಯಕಾರಿ ಮುಖದ ಪ್ರದರ್ಶನವನ್ನೂ ಮಾಡುತ್ತಿದೆ. ವಿವಿಧ ರೀತಿಯ ಅಪರಾಧ ಪ್ರಕರಣಗಳ ಜತೆಗೆ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ. ಪ್ರವಾಸಿಗರು ಮಾತ್ರವಲ್ಲದೆ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನೂ ಗುರಿಯಾಗಿರಿಸಿಕೊಂಡು ಮಾದಕ ವಸ್ತುಗಳ ಜಾಲ ಸಕ್ರಿಯವಾಗಿರುವ ಬಗ್ಗೆ ಮಾಹಿತಿಗಳು ಇರುವುದರಿಂದ ಪೊಲೀಸರು ಜಾಗರೂಕತೆ ವಹಿಸಿದ್ದಾರೆ.
ಕಳೆದ ೨ ವರ್ಷಗಳಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ವಿವಿಧ ಮಾದರಿಯ ಮಾದಕ ವಸ್ತುಗಳು ಒಂದು ವೇಳೆ ಮಾದಕ ವ್ಯಸನಿಗಳು ಅಥವಾ ಯುವಕರ ಕೈ ಸೇರಿದ್ದರೆ ಎಂಥ ಅನಾಹುತ ಸಂಭವಿಸುತ್ತಿತ್ತು ಎನ್ನುವುದನ್ನು ಕಲ್ಪಿಸಿಕೊಂಡರೂ ಆತಂಕವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು. ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಮಾದಕ ವಸ್ತುಗಳು ಅವರ ಕಣ್ತಪ್ಪಿಸಿ ವ್ಯಸನಿಗಳ ಬಳಿ ಸೇರಿರುವ ಬಗ್ಗೆಯೂ ಹಿರಿಯ ಪೊಲೀಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಾರೆ. ಬಹುತೇಕ ಮಾದಕ ವಸ್ತುಗಳು ಜಿಲ್ಲೆಗೆ ಬಿಹಾರ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ರೈಲುಗಳ ಮೂಲಕ ಪೂರೈಕೆ ಆಗುತ್ತಿರುವುದು ಈ ಹಿಂದಿನ ಪ್ರಕರಣಗಳಿಂದ ಸಾಬೀತಾಗಿದೆ.
ಮೈಸೂರು ತನಕ ರೈಲಿನಲ್ಲಿ ತರುವ ಮಾದಕ ವಸ್ತುಗಳನ್ನು ಅಲ್ಲಿಂದ ಕೊಡಗಿಗೆ ಬಸ್‌ಗಳಲ್ಲಿ ತರಲಾಗುತ್ತದೆ. ಸಾಮಾನ್ಯ ಪ್ರಯಾಣಿಕರಂತೆ ಬಸ್‌ಗಳಲ್ಲಿ ಪ್ರಯಾಣಿಸುವ ದಂಧೆಕೋರರು ಟ್ರಾವೆಲ್ ಬ್ಯಾಗಗಳಲ್ಲಿ ಸುಲಭವಾಗಿ ಯಾರಿಗೂ ಅನುಮಾನ ಬಾರದಂತೆ ಮಾದಕ ವಸ್ತುಗಳನ್ನು ಜಿಲ್ಲೆಯ ಗಡಿಭಾಗ ಕೊಪ್ಪಕ್ಕೆ ತಂದು ಅಲ್ಲಿಂದ ಕೊಡಗಿನ ಬೇರೆ ಬೇರೆ ಭಾಗಕ್ಕೆ ಪೂರೈಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇದೊಂದು ದೊಡ್ಡ ಜಾಲವಾಗಿದ್ದು. ಪೊಲೀಸರು ಹೆಡೆಮುರಿ ಕಟ್ಟಿದ್ದಷ್ಟೂ ದಂಧೆಕೋರರು ತಮ್ಮ ಜಾಲವನ್ನು ವಿಸ್ತರಿರಿಸುವ ಮೂಲಕ ಪೊಲೀಸರಿಗೆ ಸವಾಲು ಹಾಕುತ್ತಿದ್ದಾರೆ.
ಮಾದಕ ವಸ್ತುಗಳ ಅಕ್ರಮ ಸಾಗಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಕೊಡಗಿನಲ್ಲಿ ೨೦೨೨ರಲ್ಲಿ ೨೧ ಪ್ರಕರಣಗಳು ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ೪,೩೬,೭೦೦ ರೂ. ಮೌಲ್ಯದ ೨೪.೦೨೬ ಕೆಜಿ ಒಣ ಗಾಂಜಾ, ೩೮,೫೦೦ ರೂ. ಮೌಲ್ಯದ ೧೫.೫೦ ಗ್ರಾಂ ಎಂಡಿಎಂಎ ಹರಳು ಹಾಗೂ ೧೧ ಲಕ್ಷ ರೂ. ಮೌಲ್ಯದ ೧ ಕೆಜಿ ೧೬೦ ಗ್ರಾಂ ಹ್ಯಾಶ್ ಆಯಿಲ್ ವಶಪಡಿಸಿಕೊಳ್ಳಲಾಗಿತ್ತು. ೨೦೨೩ರಲ್ಲಿ ಒಟ್ಟು ೧೦೧ ಪ್ರಕರಣಗಳು ದಾಖಲಾಗಿವೆ. ೧೯,೩೭,೮೦೦ ರೂ. ಮೌಲ್ಯದ ೮೯.೨೧೭ ಕೆಜಿ ಗಾಂಜಾ, ೫.೧೦ ಲಕ್ಷ ರೂ. ಮೌಲ್ಯದ ೧೫೪.೨೬ ಗ್ರಾಂ ಎಂಡಿಎಂಎ, ೨೭ ಸಾವಿರ ರೂ. ಮೌಲ್ಯದ ಎಲ್‌ಎಸ್‌ಡಿ ಹಾಗೂ ೩೦ ಸಾವಿರ ರೂ. ಮೌಲ್ಯದ ೩.೪೫ ಗ್ರಾಂ ಕೊಕೇನ್ ಪುಡಿ ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಜ. ಅಂತ್ಯದ ತನಕ ೧೭ ಸಾವಿರ ರೂ. ಮೌಲ್ಯದ ೩೬೫ ಗ್ರಾಂ ಮಾದಕ ವಸ್ತು ಪೊಲೀಸರಿಗೆ ಸಿಕ್ಕಿದೆ.
೨೦೨೨ನೇ ಸಾಲಿನಲ್ಲಿ ದಾಖಲಾಗಿರುವ ೨೧ ಪ್ರಕರಣಗಳಲ್ಲಿ ೪೯ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ೨೦ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ೧ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ೨೦೨೩ರಲ್ಲಿ ದಾಖಲಾದ ೧೦೧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ೨೩೪ ಆರೋಪಿಗಳನ್ನು ಬಂಧಿಸಲಾಗಿತ್ತು. ೮೮ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ೫ ಪ್ರಕರಣಗಳು ತನಿಖೆಯಲ್ಲಿದೆ. ೮ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ೨೦೨೪ರ ಜನವರಿ ಅಂತ್ಯಕ್ಕೆ ೮ ಪ್ರಕರಣಗಳು ದಾಖಲಾಗಿದ್ದು ೧೮ ಆರೋಪಿಗಳ ಬಂಧನ ಆಗಿದೆ. ೨ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಉಳಿದ ೦೬ ಪ್ರಕರಣಗಳ ತನಿಖೆ ನಡೆಯುತ್ತಿದೆ.
ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಕಾಲ ಕಾಲಕ್ಕೆ ನಾಶಪಡಿಸಲಾಗುತ್ತಿರುತ್ತದೆ. ಕಳೆದ ವರ್ಷದ ಹಾಸನದಲ್ಲಿ ಸುರಕ್ಷಿತ ವಾತಾವರಣದಲ್ಲಿ ಇಂಥ ವಸ್ತುಗಳನ್ನು ದಹಿಸಲಾಗಿತ್ತು. ಈ ವರ್ಷ ಫೆ.೯ಕ್ಕೆ ಬೆಂಗಳೂರಿನ ದಾಬಸ್‌ಪೇಟೆಯಲ್ಲಿ ನಡೆದ ಮಾದಕ ದ್ರವ್ಯ ವಿನಾಶ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಡ್ರಗ್ ಡಿಸ್ಪೋಸಲ್ ಕಮಿಟಿಯಿಂದ ಒಟ್ಟು ೪೬ ಪ್ರಕರಣಗಳಲ್ಲಿ ರೂ. ೧೬ ಲಕ್ಷ ಮೌಲ್ಯದ ೪೩ ಕೆ.ಜಿ ಗಾಂಜಾ, ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು.
ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ ಆಗಿದೆ. ಹಾಗಾಗಿ ಮಾದಕ ವಸುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಕೆ.ಎಸ್.ಪಿ ಮೊಬೈಲ್ ತಂತ್ರಾಂಶದ ಮೂಲಕ ಮಾಹಿತಿ ನೀಡಿ ಸಹಕರಿಸಬೇಕು. ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.
ಕೆ. ರಾಮರಾಜನ್, ಕೊಡಗು ಎಸ್‌ಪಿ