

* ವಿಶ್ವವಿದ್ಯಾನಿಲಯಗಳಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ
* ಸಾರ್ವಜನಿಕರಿಂದ ಉತ್ತಮ ಸ್ಪಂದನೆ
ಚೇತನ್ ಚಕ್ಕೆರೆ ಬಿಡದಿ
ಬನ್ನಿಕುಪ್ಪೆ ಎಂಬ ಪುಟ್ಟ ಕ್ಲಸ್ಟರ್‌ನಲ್ಲಿ ಆರಂಭವಾದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅರಿವಿನ ಅಭಿಯಾನ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಈ ಅಭಿಯಾನದ ಕಂಪು ಈಗ ವಿಶ್ವವಿದ್ಯಾನಿಲಯಗಳಲ್ಲಿ ಅಳವಡಿಕೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ.
ಬನ್ನಿಕುಪ್ಪೆ (ಬಿ) ಕ್ಲಸ್ಟರ್‌ನಲ್ಲಿ ಸಮೂಹ ಸಂಪನ್ಮೂಲ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ ಆರಂಭಿಸಿದ ಮೊಬೈಲ್ ಬಿಡಿ ಪುಸ್ತಕ ಹಿಡಿ ಅರಿವಿನ ಅಭಿಯಾನವು ಶಾಲಾ ಅಂಗಳದಲ್ಲಿ ಯಶಸ್ವಿಯಾಗಿ ನಡೆದಿತ್ತು. ತದನಂತರ ಇದು ದೂರದರ್ಶನ ಸೇರಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯಾದ್ಯಂತ ತಲುಪಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತ್ತು. ಬಳಿಕ ಇದು ರಾಜ್ಯ ಸರ್ಕಾರದ ಗಮನಕ್ಕೂ ಬಂದಿತ್ತು. ಸರ್ಕಾರ ಈ ಅಭಿಯಾನವನ್ನು ವಿಸ್ತರಣೆ ಮಾಡುವ ಮನಸ್ಸು ಮಾಡಿದೆ. ಇದರ ಭಾಗವಾಗಿ ಈಗ ವಿಶ್ವವಿದ್ಯಾಲಯಗಳಲ್ಲಿ ಈ ಅಭಿಯಾನ ಕಡ್ಡಾಯಗೊಳಿಸಿ ಸರ್ಕಾರದ ಆದೇಶಿಸಿದೆ.
2025ರ ಫೆಬ್ರವರಿ 14ರಿಂದ ಬನ್ನಿಕುಪ್ಪೆ ಬಿ ಕ್ಲಸ್ಟರ್ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ, ಕರ್ತವ್ಯ ನಿರ್ವಹಿಸುತ್ತಿರುವ 14 ಸರ್ಕಾರಿ ಶಾಲೆಗಳಲ್ಲಿ ಪ್ರತಿ ಶನಿವಾರ ಶಾಲಾ ಅವಧಿಯ ನಂತರ ಪಾಲಕರನ್ನು ಶಾಲೆಗೆ ಕರೆಸಿ, ಒಂದು ಗಂಟೆ ಮೊಬೈಲ್ ಸ್ವಿಚ್ಡ್‌ಆ್ ಮಾಡಿಸಿ, ಪಾಲಕರು-ಮಕ್ಕಳು ಒಟ್ಟಿಗೆ ಕುಳಿತು ಪುಸ್ತಕ ಓದುವ, ಬೇಸಿಗೆ ರಜೆಯಲ್ಲಿ ಮೊಬೈಲ್ ನೋಡದೆ ಓದಲು ಪುಸ್ತಕ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲಕರ ಮನೆಯಲ್ಲಿ ಈ ಅಭಿಯಾನ ಪ್ರಾರಂಭ ಮಾಡಲಾಯಿತು.
ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಕಾಲ ದೂರವಾಗಿ ಮೊಬೈಲ್ ನೀಡಿ ಊಟ ಮಾಡಿಸುವ ಪರಿಪಾಠ ಅಭ್ಯಾಸವಾಗುತ್ತಿರುವುದು ದುರಂತ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ವ್ಯಾಪಿಸಿರುವ ಮೊಬೈಲ್ ಗೀಳನ್ನು ಬಿಡಿಸಿ ಸ್ಕ್ರೀನ್ ಟೈಮಿನ ದುಷ್ಪರಿಣಾಮ ಅರಿವು ಮೂಡಿಸಿ ಚಟುವಟಿಕೆಯ ಬದುಕನ್ನು ಉತ್ತೇಜಿಸಿ ಪುಸ್ತಕ ಓದುವ ಅಭಿರುಚಿ ಸಂಸ್ಕೃತಿ ಹೆಚ್ಚಿಸುವ ಅಂಶವನ್ನು ಈ ಅರಿವಿನ ಅಭಿಯಾನವು ಹೊಂದಿದೆ.
ವಿದ್ಯಾರ್ಥಿ ಹಾಗೂ ಯುವ ಸಮೂಹ ಮೊಬೈಲ್ ಗೀಳಿಗೆ ಅಂಟಿಕೊಂಡು ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ದೈಹಿಕ, ಮಾನಸಿಕ ಆರೋಗ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಕೌನ್ಸೆಲಿಂಗ್ ಸೇರಿ ಹಲವು ಉಪಕ್ರಮಗಳ ಚಿಂತನೆಗಳನ್ನು ಈ ಅಭಿಯಾನ ಹೊಂದಿದೆ. ಬನ್ನಿಕುಪ್ಪೆ ಬಿ ಕ್ಲಸ್ಟರ್‌ನ 14 ಸರ್ಕಾರಿ ಶಾಲೆಗಳ ವ್ಯಾಪ್ತಿಗೆ ಒಳಪಡುವ ಹಲವು ಪಾಲಕರು ಯುವ ಸಮುದಾಯ ಈ ಯೋಜನೆಯಿಂದ ಪ್ರಭಾವಿತರಾಗಿ ಶಾಲಾ ಅವಧಿಯ ನಂತರ ಶಾಲೆಗೆ ಬಂದು ಪುಸ್ತಕ ಓದುವ ಅಭಿರುಚಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳು ರಾಜ್ಯದ ಬೇರೆ ಜಿಲ್ಲೆಗಳಿಗೆ ತಲುಪಿ ಹಲವು ಶಿಕ್ಷಕರು, ಪಾಲಕರು ಸ್ಥಳಗಳಲ್ಲಿ ಅಭಿಯಾನ ಅಳವಡಿಸಿರುವ ವಿಚಾರವನ್ನು ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಬಳಿ ಹಂಚಿಕೊಂಡಿದ್ದಾರೆ.
ಈ ಅಭಿಯಾನದ ಪರವಾಗಿ ಕೆಲ ಶಾಸಕರು, ಶಿಕ್ಷಣಾಸಕ್ತರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಪತ್ರ ಬರೆದು ಈ ಅಭಿಯಾನವನ್ನು ಸರ್ಕಾರದ ಎಲ್ಲ ಶಾಲಾ - ಕಾಲೇಜುಗಳಲ್ಲಿ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿ ಪ್ರಾರ್ಥನಾ ಅವಧಿ ಅಥವಾ ಬಿಡುವಿನ ಅವಧಿಯಲ್ಲಿ ಮಕ್ಕಳಿಗೆ ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಪುಸ್ತಕ ಓದುವ ಅನುಕೂಲಗಳ ಕುರಿತು ಮಾತನಾಡಲು ಆದೇಶಿಸಬೇಕೆಂದು ಕೋರಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಅರಿವಿನ ಅಭಿಯಾನವನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಬಂದಿದೆ. ತುಮಕೂರು ವಿಶ್ವವಿದ್ಯಾನಿಲಯ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಅಭಿಯಾನವನ್ನು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಿ ಆದೇಶ ಮಾಡಿದೆ. ಉನ್ನತ ಶಿಕ್ಷಣ ಇಲಾಖೆಯು ಮೇ 29 ರಂದು ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿಯವರಿಗೆ ಈ ಅಭಿಯಾನದ ಅನುಷ್ಠಾನದ ಪತ್ರ ಬರೆದಿದ್ದಾರೆ. ಅದರಂತೆ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಯವರು *** ಜೂ.18ರಿಂದಲೇ ಅರಿವಿನ ಅಭಿಯಾನವನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಆದೇಶ ಮಾಡಿದ್ದಾರೆ.
ಪ್ರತಿ ಶನಿವಾರ ಪಾಲಕರನ್ನು ಶಾಲೆಗೆ ಕರೆಸಿ ಒಂದು ಗಂಟೆ ಮೊಬೈಲ್ ಸ್ವಿಚ್ಡ್ ಆ್ ಮಾಡಿಸಿ, ವಿದ್ಯಾರ್ಥಿಗಳ ಜತೆ ಪುಸ್ತಕ ಓದಲು ಪ್ರೇರೇಪಿಸಿದೆವು. ಈಗ ಇದು ಚಳವಳಿಯ ರೂಪ ಪಡೆಯಿತು. ಈ ವಿಶೇಷ ಅರಿವಿನಿಂದ ಉತ್ತೇಜಿತರಾಗಿರುವ ಪ್ರಥಮ್ ಬುಕ್ಸ್ ಸಂಸ್ಥೆ ನಮ್ಮ ರಾಮನಗರ ತಾಲೂಕಿನ ಎಲ್ಲ 274 ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯ ಸ್ಥಾಪಿಸಲು ಮುಂದೆ ಬಂದಿದೆ. ಚಿಕ್ಕವೀರಯ್ಯ ಟಿ.ಎನ್.ಅಭಿಯಾನದ ಕರ್ತೃಕ್ಲಷ್ಟರ್‌ಮಟ್ಟದಲ್ಲಿ ಪ್ರಾರಂಭವಾದ ಈ ಓದಿನ ಅಭಿಯಾನ ರಾಜ್ಯಮಟ್ಟದಲ್ಲಿ ಸದ್ದು ಮಾಡಿತ್ತು. ಇದರ ಭಾಗವಾಗಿ ತುಮಕೂರು ವಿವಿ ಅವರು ಈ ಅಭಿಯಾನವನ್ನುಅಡಾಪ್ಟ್ ಮಾಡಿಕೊಂಡಿದೆ. ನಮ್ಮ ಬನ್ನಿಕುಪ್ಪೆ ಬಿ ಕ್ಲಷ್ಟರ್‌ನ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಅವರು ಪ್ರಾರಂಭಿಸಿದ ಈ ಅಭಿಯಾನಕ್ಕೆ ಮನ್ನಣೆ ಸಿಕ್ಕಿದಂತಾಗಿದೆ.ಸೋಮಲಿಂಗಯ್ಯ, ಬಿಇಒ, ರಾಮನಗರಚಿಕ್ಕವೀರಯ್ಯ ಅವರು ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಪ್ರಾರಂಭ ಮಾಡಿದ್ದರು. ಈ ಬಗ್ಗೆ ನಾನು ಗಮನಿಸಿ ಈ ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅಭಿಯಾನವನ್ನು ಪ್ರಾರಂಭ ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ.ಎಚ್.ಸಿ.ಬಾಲಕೃಷ್ಣ , ಶಾಸಕ