Ganesh Chaturthi : ಗಣೇಶನಿಗೆ ಮೊದಲ ಪೂಜೆ ಯಾಕೆ ಮಾಡುತ್ತಾರೆ ಗೊತ್ತಾ?

ganeshchaturthi (1)
Published on

ಬೆಂಗಳೂರು: ಗಣಪತಿಯು ಕಷ್ಟಗಳಿಂದ ರಕ್ಷಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಯಾವುದೇ ಪೂಜೆ ಮಾಡಿದರೂ ಮೊದಲ ಪೂಜೆ ಗಣೇಶನಿಗೆ. ಮದುವೆಯ ಶುಭಾಶಯ ಪತ್ರಗಳು ಮತ್ತು ಸಂದರ್ಭಕ್ಕೆ ಅನುಗುಣವಾಗಿ ತಯಾರಿಸಲಾದ ಕಾರ್ಡ್‌ಗಳಲ್ಲಿ ಗಣಪತಿಯ ಚಿತ್ರಗಳನ್ನು ಮುದ್ರಿಸಲಾಗುತ್ತದೆ. ಗಣಪತಿ ಹಬ್ಬದ ಸಿದ್ಧತೆಗಳು ದೇಶಾದ್ಯಂತ ನಡೆಯುತ್ತಿವೆ ಮತ್ತು ಈ ಮಧ್ಯೆ ಎಲ್ಲಾ ಧಾರ್ಮಿಕ ಹಬ್ಬಗಳಲ್ಲಿ ಗಣಪತಿ ಪೂಜೆಯನ್ನು ಮೊದಲು ಏಕೆ ಮಾಡಲಾಗುತ್ತೆ ಎಂದು ತಿಳಿಯುವ ಕುತೂಹಲ ಇದ್ದೆ ಇರುತ್ತದೆ.

ಗಣೇಶ ಚತುರ್ಥಿಯನ್ನು ಗಣೇಶನ ಜನ್ಮದಿನದಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಜನರು ಆಧ್ಯಾತ್ಮಿಕ ಶಕ್ತಿಗಾಗಿ, ಕೆಲಸದ ಸಾಧನೆಗಾಗಿ ಮತ್ತು ಪ್ರಯೋಜನಗಳನ್ನು ಪಡೆಯಲು ಗಣೇಶನನ್ನು ಪೂಜಿಸುತ್ತಾರೆ. ಗಣೇಶನನ್ನು ಎಲ್ಲಾ ದುಃಖಗಳನ್ನು ನಾಶಮಾಡುವವನು, ದುಃಖವನ್ನು ನಿವಾರಿಸುವವನು, ಸದ್ಭಾವನೆಯನ್ನು ನೀಡುವವನು ಎಂದು ಪರಿಗಣಿಸಲಾಗುತ್ತದೆ.

ಗಣೇಶನನ್ನು ಈ ರೀತಿ ಪೂಜಿಸಲು ಪುರಾಣಗಳ ಪ್ರಕಾರ, ಪ್ರತಿಯೊಂದು ಧಾರ್ಮಿಕ ಹಬ್ಬ ಮತ್ತು ಆಚರಣೆಯು ಗಣೇಶನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತದೆ. ಗಣೇಶ ದೇವರ ಒಂದು ರೂಪವಾಗಿದ್ದು, ಮಾನವ ಮತ್ತು ಪ್ರಾಣಿಗಳ ಭಾಗಗಳಿಂದ ಮಾಡಲ್ಪಟ್ಟಿದೆ. ಇದು ಆಧ್ಯಾತ್ಮಿಕ ಮಹತ್ವವನ್ನು ತೋರಿಸುತ್ತದೆ. ಆದರೆ ಗಣೇಶನಿಗೆ ಮೊದಲ ಪೂಜೆ ಯಾಕೆ ಮಾಡಲಾಗುತ್ತದೆ ನೋಡೋಣ.

ಗ್ರಂಥಗಳ ಪ್ರಕಾರ, ಒಮ್ಮೆ ಪಾರ್ವತಿ ದೇವಿಯು ಅಂತಃಪುರದ ಮುಂಭಾಗದಲ್ಲಿ ಕಾವಲು ಕಾಯಲು ಆದೇಶಿಸುತ್ತಾಳೆ ಮತ್ತು ಯಾರನ್ನೂ ಒಳಕ್ಕೆ ಬಿಡಬಾರದು ಎಂಬುದಾಗಿ ನಿರ್ದೇಶಿಸುತ್ತಾಳೆ. ಗಣಪ ಕಾವಲುಗಾರನಾಗಿ ಅಂತಃಪುರವನ್ನು ಕಾಯುತ್ತಾನೆ. ಈ ಸಮಯದಲ್ಲಿ ಶಿವ ದೇವರು ಒಳಕ್ಕೆ ಹೋಗುವಾಗ ಗಣೇಶ ಶಿವನನ್ನೇ ತಡೆಯುತ್ತಾನೆ. ಇದರಿಂದ ಕ್ರೋಧಗೊಂಡ ಶಿವ ಗಣೇಶನ ತಲೆಯನ್ನು ತುಂಡರಿಸುತ್ತಾನೆ. ಪಾರ್ವತಿ ದೇವಿಯು ಓಡುತ್ತಾ ಬಂದಾಗ ಗಣೇಶನ ಕೆಳಕ್ಕುರುಳಿದ ತಲೆಯನ್ನು ನೋಡುತ್ತಾಳೆ. ದುಃಖ ಮತ್ತು ಕ್ರೋಧದಿಂದ ಪಾರ್ವತಿಯು ತನ್ನ ಮಗನನ್ನು ಪುನಃ ಬದುಕಿಸದೇ ಇದ್ದಲ್ಲಿ ಇಡೀ ವಿಶ್ವವನ್ನೇ ನಾಶ ಮಾಡುವುದಾಗಿ ಆಕೆ ಹೇಳುತ್ತಾಳೆ. ಆಗ ಶಿವ ದೇವರು ಗಣಪನ ತುಂಡರಿಸಿದ ತಲೆಯನ್ನು ಆನೆಯ ತಲೆಯೊಂದಿಗೆ ಬದಲಾಯಿಸುತ್ತಾರೆ ಮತ್ತು ಮರಳಿ ಜೀವದಾನ ಮಾಡುತ್ತಾರೆ. ಶಿವನು ಗಣಪನಿಗೆ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ನೀಡಿ ಮೊದಲ ಪೂಜೆಯ ವರವನ್ನು ಗಣಪತಿಗೆ ಕರುಣಿಸುತ್ತಾರೆ. ಇದರ ನಂತರ ಪ್ರಥಮ ಪೂಜೆಯನ್ನು ಗಣಪನಿಗೆ ಮೊದಲು ಮಾಡಲಾಗುತ್ತದೆ. ಹೀಗೆ ಗಣಪನಿಗೆ ಪ್ರಥಮ ಪೂಜೆಯ ವರವನ್ನು ಕರುಣಿಸಲಾಗುತ್ತದೆ.

ಇನ್ನೊಂದು ಕಥೆಯ ಪ್ರಕಾರ ಗಣೇಶನಿಗೆ ಏಕೆ ಪ್ರಥಮ ಪೂಜೆಯನ್ನು ನೀಡಲಾಗುತ್ತದೆ ಎಂಬುದಕ್ಕೆ ಕಾರಣವನ್ನು ತಿಳಿಸಲಾಗಿದೆ. ಒಮ್ಮೆ ಗಣಪನ ಹಿರಿಯಣ್ಣ ಕಾರ್ತೀಕೇಯ ಎಲ್ಲಾ ದೇವತೆಗಳಿಗಿಂತಲೂ ತಾನೇ ಶ್ರೇಷ್ಠ ಎಂಬುದಾಗಿ ಘೋಷಿಸಿಕೊಳ್ಳುತ್ತಾರೆ. ಆಗ ಪರಶಿವನು ಒಂದು ಪಂದ್ಯವನ್ನು ಕಾರ್ತೀಕೇಯ ಮತ್ತು ಗಣಪನ ಮುಂದೆ ಇಡುತ್ತಾರೆ ಅದರ ಪ್ರಕಾರ ಸಂಪೂರ್ಣ ವಿಶ್ವವನ್ನು ಯಾರು ಬೇಗ ಸುತ್ತಿ ಬರುತ್ತಾರೋ ಅವರೇ ಶ್ರೇಷ್ಠರು ಎಂಬುದಾಗಿ ಶಿವನು ಹೇಳುತ್ತಾರೆ. ಆಗ ಕಾರ್ತೀಕೇಯನು ತನ್ನ ನವಿಲನ್ನೇರಿ ಪ್ರಪಂಚವನ್ನು ಸುತ್ತುವುದಕ್ಕೆ ಹೊರಡುತ್ತಾರೆ. ಆದರೆ ಗಣೇಶನು ತನ್ನ ತಂದೆ ತಾಯಿ ಶಿವ ಮತ್ತು ಪಾರ್ವತಿಗೆ ಮೂರು ಸುತ್ತನ್ನು ಹಾಕುತ್ತಾರೆ. ವಿಶ್ವವನ್ನು ಕಾಯುವ ತನ್ನ ತಂದೆ ತಾಯಿಗೆ ಪ್ರದಕ್ಷಿಣೆ ಹಾಕಿ ಗಣೇಶನು ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ. ನಮ್ಮ ದೇಹದ ಮೂಲಾಧಾರ ಚಕ್ರವನ್ನು ಗಣಪತಿ ನಡೆಸುತ್ತಿದ್ದಾರೆ ಎಂಬ ಮಾತಿದೆ. 'ಮೂಲಾಧಾರವು' ವಸ್ತು ಮತ್ತು ಆಧ್ಯಾತ್ಮಿಕ ಜಗತ್ತಿನ ಅಂತರ್ಮುಖವಾಗಿದೆ. ಈ ಎರಡೂ ಜಗತ್ತುಗಳನ್ನು ಗಣಪನು ನಿಯಂತ್ರಿಸುತ್ತಿದ್ದಾರೆ. ಗಣೇಶನ ಅಧಿನಿಯಮಕ್ಕೆ ಒಳಪಟ್ಟಿರುವ 'ಮೂಲಾಧಾರ' ಚಕ್ರದಿಂದ ನಮ್ಮ ವಸ್ತು ಜೀವನ ಅಂತೆಯೇ ಆಧ್ಯಾತ್ಮಿಕ ಪ್ರಯಾಣ ಆರಂಭವಾಗುತ್ತದೆ. ಆದ್ದರಿಂದ ನಮ್ಮ ಜೀವನ ಯಾವುದೇ ತೊಂದರೆಗಳಿಲ್ಲದೆ ಸಾಗಬೇಕು ಎಂದಾದಲ್ಲಿ, ಗಣೇಶನ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಬೇಕು. ನಮ್ಮ ಜೀವನದ ಸಕಲ ತೊಂದರೆಗಳನ್ನು ನಿವಾರಿಸುವವರು ಗಣಪನೇ ಆಗಿದ್ದು, ನಮ್ಮ ಯಾವುದೇ ಕೆಲಸದ ಆರಂಭದಲ್ಲಿ ಗಣಪನನ್ನು ಪೂಜಿಸಿದರೆ ತೊಂದರೆಗಳು ನಿವಾರಣೆಗೊಂಡು ಶುಭಫಲ ನಮ್ಮದಾಗುತ್ತದೆ ಎನ್ನುವ ಪುರಾದಣ ಕಥೆಗಳಿವೆ. ಹೀಗಾಗಿ ಶುಭ ಕಾರ್ಯವನ್ನು ಪ್ರಾರಂಭಿಸುವ ಮುಲು ಗಣಪತಿಗೆ ಕೊದಲ ಪೂಜೆ ನೇರವೇರಿಸಲಾಗುತ್ತದೆ.

ಆನೆಯ ತಲೆ, ದೊಡ್ಡ ಕಿವಿ ಮತ್ತು ದೊಡ್ಡ ಹೊಟ್ಟೆಯನ್ನು ಹೊಂದಿರುವ ಏಕೈಕ ದೇವರು ಗಣೇಶ. ಆನೆಯ ತಲೆ ಬುದ್ಧಿವಂತಿಕೆಯ ಸಂಕೇತವಾಗಿದೆ. ದೊಡ್ಡ ಕಿವಿಯಲ್ಲಿ ಏನು ಹೇಳಿದರೂ ಅವನು ಕೇಳುತ್ತಾನೆ ಎಂದು ನಂಬಲಾಗಿದೆ. ವಿಘ್ನಗಳನ್ನು ಹೋಗಲಾಡಿಸುವ ಮತ್ತು ಕಷ್ಟಗಳಿಂದ ರಕ್ಷಿಸುವ ಗಣಪತಿಯನ್ನು ಪ್ರಾರ್ಥಿಸಿದರೆ ಜೀವನದಲ್ಲಿನ ಅನರ್ಥಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದ ಭಕ್ತರು ಯಾವುದೇ ಪೂಜೆಗೂ ಮುನ್ನ ಶ್ರದ್ಧಾ ಭಕ್ತಿಯಿಂದ ಗಣಪತಿಯನ್ನು ಪೂಜಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net