ತೆಗೆದ ಹಂಪ್ಸ್ ಅಳವಡಿಸಿ ಅಪಘಾತದ ಆತಂಕದ ಜತೆಗೆ ರಸ್ತೆ ದಾಟುವವರಿಗೆ ಸಮಸ್ಯೆ

oppo_0
oppo_0
Published on

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ರೋಡ್ ಶೋ ಸಂದರ್ಭ ನಗರದ ವಿವಿಧ ಕಡೆ ತೆರವು ಮಾಡಲಾದ ಹಂಪ್ಸ್‌ಗಳನ್ನು ವಾರ ಕಳೆದರೂ ಮತ್ತೆ ಅಳವಡಿಸಿಲ್ಲ. ಇದರಿಂದಾಗಿ ವೇಗವಾಗಿ ವಾಹನಗಳ ಚಲಾವಣೆಯಿಂದ ರಸ್ತೆ ದಾಟುವವರಿಗೆ, ವಾಹನ ಸವಾರರಿಗೆ ಸಮಸ್ಯೆಯಾಗಿದೆ.


ಕೊಟ್ಟಾರ ಚೌಕಿಯಿಂದ ನವಭಾರತ್ ಸರ್ಕಲ್‌ವರೆಗಿನ ಒಂದು ಭಾಗದ ರಸ್ತೆಯ ಹಂಪ್ಸ್‌ಗಳನ್ನು ಸಂಪೂರ್ಣ ತೆಗೆಯಲಾಗಿದೆ. ಹಂಪ್ ತೆರವಿನಿಂದಾಗಿ ನಗರದಲ್ಲಿ ಅಪಘಾತದ ಆತಂಕ ಉಂಟಾಗಿದೆ. ಕ್ರಾಸಿಂಗ್ ಇರುವಲ್ಲಿ ಹಂಪ್ಸ್ ತೆರವು ಮಾಡಿರುವುದರಿಂದ ವಾಹನಗಳು ಯು ಟರ್ನ್ ತೆಗೆಯಲು ಹಲವು ಸಮಯ ಕಾಯುವ ಸ್ಥಿತಿ ಎದುರಾಗಿದೆ. ಇದರಿಂದ ರಸ್ತೆ ಬ್ಲಾಕ್ ಆಗುತ್ತಿವೆ.


ರಸ್ತೆ ದಾಟಲು ಸಮಸ್ಯೆ:
ಕೊಟ್ಟಾರ ಚೌಕಿ, ಉರ್ವಸ್ಟೋರ್, ಚಿಲಿಂಬಿ, ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್, ಬಳ್ಳಾಲ್‌ಭಾಗ್, ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ 13ಕ್ಕೂ ಹೆಚ್ಚು ಹಂಪ್‌ಗಳನ್ನು ತೆರವು ಮಾಡಲಾಗಿದೆ. ಮೊದಲೇ ವಾಹನ ದಟ್ಟಣೆ ಇರುವ ರಸ್ತೆಯಾಗಿರುವ ಇಲ್ಲಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಪಾದಚಾರಿಗಳು ರಸ್ತೆ ದಾಟಲು ಸಮಸ್ಯೆಯಾಗುತ್ತಿತ್ತು. ಇದೀಗ ಹಂಪ್ ತೆರವಿನಿಂದ ಮತ್ತಷ್ಟು ಸಂಕಷ್ಟ ಉಂಟಾಗಿದೆ. ಇನ್ನೊಂದೆಡೆ ಪ್ರಮುಖ ಜಂಕ್ಷನ್‌ಗಳಾದ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್, ಬಳ್ಳಾಲ್‌ಭಾಗ್‌ನಲ್ಲಂತೂ ವಾಹನ ಕ್ರಾಸ್ ಮಾಡುವುದು ಸವಾಲಾಗಿದೆ. ಹಂಪ್ ಇಲ್ಲದ ಕಾರಣ ವಾಹನಗಳು ವಿಪರೀತ ವೇಗದಲ್ಲಿ ಸಂಚಾರ ಮಾಡುತ್ತಿರುವುದು ಸಮಸ್ಯೆಯಾಗಿದೆ.


ಕೂಡಲೇ ಹಂಪ್ ಅಳವಡಿಸಿ
ರೋಡ್ ಶೋ ಹಿನ್ನೆಲೆ ಹಂಪ್ ತೆರವುಗೊಳಿಸಿ 10ದಿನ ಕಳೆದರೂ ಮತ್ತೆ ಹಂಪ್ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿಲ್ಲ. ಜನನಿಬಿಡ ರಸ್ತೆಯಲ್ಲಿ ಅಪಘಾತ ತಡೆಯಲು ಹಾಗೂ ಜನರಿಗೆ ಅನುಕೂಲವಾಗಲು ಹಂಪ್‌ಗಳ ಅಗತ್ಯವಿದ್ದು, ತಕ್ಷಣವೇ ಎಚ್ಚೆತ್ತುಕೊಂಡು ಹಂಪ್ ಅಳವಡಿಸಬೇಕಿದೆ. ಅಷ್ಟೇ ಅಲ್ಲದೆ ಹಂಪ್‌ಗಳಿಗೆ ಸರಿಯಾದ ಬಣ್ಣ ಬಳಿದು, ರ್ಲಿೆಕ್ಟರ್ ಅಳವಡಿಸಿ ವೈಜ್ಞಾನಿಕ ರೀತಿಯಲ್ಲಿ ಹಂಪ್ ಅಳವಡಿಸಬೇಕಿದೆ.

ಹಂಪ್ಸ್ ತೆರವು ಮಾಡುವ ಉತ್ಸಾಹ ಅದನ್ನು ಮತ್ತೆ ಹಾಕಲು ಇರುವುದಿಲ್ಲ. ವಾಹನಗಳ ವೇಗ ಮಿತಿ ಮೀರಿದೆ. ಯಾವುದೇ ಅಪಘಾತ ನಡೆದು ಸಾವು, ನೋವು ಸಂಭವಿಸುವ ಮುನ್ನ ಸಂಬಂಧಪಟ್ಟವರು ಸ್ಪಂದಿಸಬೇಕಾಗಿದೆ.
ನಾಗೇಶ್ ಬಿಜೈ
ಖಾಸಗಿ ಉದ್ಯೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net