

ರಾಯಚೂರು ಜಿಲ್ಲೆಯಲ್ಲಿ ರಸಗೊಬ್ಬರವನ್ನು ಕೃಷಿ ಇಲಾಖೆಯವರು ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಿಸದೇ ಖಾಸಗಿ ವ್ಯಾಪಾರಸ್ಥರ ಮೂಲಕ ಮಾರಾಟ ಮಾಡುವ ಹುನ್ನಾರ ನಡೆದಿದೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಆರೋಪಿಸಿದರು.
ನಗರದ ಪತ್ರಿಕ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ನ್ಯಾನೋ ತಂತ್ರಜ್ಞಾನದ ಯೂರಿಯಾ ಗೊಬ್ಬರ ಮಾರಾಟ ಮಾಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಸಿರುವ ಸಂಶಯಗಳಿವೆ. ಸೂಸೈಟಿಗಳ ಮೂಲಕ ರಸಗೊಬ್ಬರ ಮಾರಾಟ ಮಾಡಿದರೆ ಎಂಆರ್‌ಪಿ ದರದಲ್ಲಿ ಮಾರಾಟ ಮಾಡಬೇಕಾಗುತ್ತದೆಂದು ಖಾಸಗಿಯವರ ಮೂಲಕ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ತಂತ್ರಗಳು ನಡೆಯುತ್ತಿವೆ. ಇದರಲ್ಲಿ ಅನೇಕ ರಾಜಕೀಯ ನಾಯಕರು ಸಹ ಭಾಗಿಯಾಗಿದ್ದಾರೆಂದು ಆರೋಪಿಸಿದರು.
ಕೇಂದ್ರ ಸರ್ಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಪಾವತಿಸದೇ ಇರುವದಿರಂದ ಬೇಡಿಕೆ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ. ಸೂಸೈಟಿಗಳಲ್ಲಿ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳ ದಾರಿತಪ್ಪಿಸುತ್ತಿದ್ದಾರೆ ಎಂದರು. ಜಿಲ್ಲೆಯ ಸಚಿವರು,ಶಾಸಕರುಗಳು ನಿಯೋಗದ ಮೂಲಕ ಮುಖ್ಯಮಂತ್ರಿ, ಕೃಷಿ ಸಚಿವರ ಗಮನ ಸೆಳೆದು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಬೇಡಿಕೆಯ ರಸಗೊಬ್ಬರು ಪೂರೈಸಲು ವ್ಯವಸ್ಥೆ ಮಾಡಬೇಕು. ರಾಷ್ಟ್ರೀಯ ಫಸಲ್ ಭೀೀಮಾ ಯೋಜನೆಯಡಿ ಬೆಳೆ ನಷ್ಟ ದಾಖಲಿಸಲು ತಂತ್ರಾಂಶ ಸ್ವೀಕರಿಸುತ್ತಿಲ್ಲ.
ಸಿರವಾರ ತಾಲೂಕಿನ ಮಲ್ಲಟ, ನವಕಲ್, ಕವಿತಾಳ ಹೋಬಳಿ ರೈತರು ಬೆಳೆ ನಷ್ಟ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಫಸಲ್ ಭೀಮಾ ಯೋಜನೆ ಅಕ್ರಮದ ಕುರಿತು ಮೂರು ಕೇಸ್ ದಾಖಲಾಗಿದ್ದದರೂ ಇಂದಿಗೂ ಸಿಐಡಿ ತನಿಖೆ ಪ್ರಾರಂಭವಾಗಿಲ್ಲ. ಕೂಡಲೇ ಸರ್ಕಾರ ರೈತರಿಗೆ ಸ್ಪಂದಿಸದೇ ಹೋದರೆ ನ್ಯಾಯಾಲಯದ ಮೊರೆ ಹೋಗಲು ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಹನುಮೇಶ ನಾಯಕ ಅರಕೇರ, ಹಾಜಿ ಮಸ್ತಾನ್, ಶಂಕರಗೌಡ ಸಿರವಾರ, ಬಸವರಾಜ ನವಲಕಲ್, ಬೂದೇಯ್ಯ ಸ್ವಾಮಿ ಇದ್ದರು.