

ಮೈಸೂರು: ಕಾವಿಕಲೆಯನ್ನು ಪುನಜ್ಜೀವನ ಮಾಡುವ ಅವಶ್ಯತೆ ಇದೆ ಎಂದು ಹಿರಿಯ ಕಲಾವಿದ ಎಸ್.ಎಂ.ಜಂಬುಕೇಶ್ವರ ತಿಳಿಸಿದರು.
ಆರ್ಟ್ ಮ್ಯಾಟರ್ಸ್ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ನಾಲ್ಕು ದಿನದ ಕಾವಿಕಲೆ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಕಾವಿಕಲೆ ಹೆಚ್ಚು ಪ್ರಚಲಿತದಲ್ಲಿ ಇತ್ತು. ಇದನ್ನು ಬಿತ್ತಿಚಿತ್ರ ಎಂದೂ ಕರೆಯುತ್ತಾರೆ. ಈ ಕಲೆಯನ್ನು ಹೆಚ್ಚಾಗಿ ದೇವಾಲಯ, ಚರ್ಚುಗಳಲ್ಲಿ ಕಲಾವಿದರು ಚಿತ್ರಿಸುತ್ರಿದ್ದರು. ಆಧುನಿಕ ಕಾಲದಲ್ಲಿ ಈ ಕಲೆ ನಶಿಸಿ ಹೋಗುತ್ತಿದೆ ಎಂದರು.
ಕಾವಿಕಲೆ ಎಂದರೆ ಗೋಡೆಗೆ ಕಂದು ಬಣ್ಣ ಬಳಿದು ಅದರ ಮೇಲೆ ಬಿಳಿ ಬಣ್ಣದಿಂದ ಚಿತ್ರ ಬಿಡಿಸುವುದು. ಈ ಕಲೆಯಲ್ಲಿ ವಿಶೇಷವಾಗಿ ದೇವರ ಚಿತ್ರ ಬಿಡಿಸಲಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್ ಕುಮಾರ್ ಮಾತನಾಡಿ, ಬುಡಕಟ್ಟು, ಜಾನಪದ ಹಾಗೂ ಕಾವಿಕಲೆಗಳು ನಮ್ಮ ಸಂಸ್ಕೃತಿಯ ಬೇರುಗಳು. ಬೇರನ್ನು ಕಳೆದುಕೊಂಡ ಮರ ಎಂದಿಗೂ ಹೂವು ಬಿಡುವುದಿಲ್ಲ. ಹಾಗಾಗಿ ಬೇರುಗಳನ್ನು ಕಳೆದುಕೊಳ್ಳುವ ಸಂಸ್ಕೃತಿ ದೀರ್ಘ ಕಾಲ ಬಾಳುವುದಿಲ್ಲ ಎಂದರು.
ಭಾರತದ ಕಲೆ, ಸಂಸ್ಕೃತಿ, ಆಚಾರ-ವಿಚಾರ ನಿಂತಿರುವುದೆ ಆಧ್ಯಾತ್ಮದ ಮೇಲೆ. ಚಿತ್ರಕಲೆ ಎಂದರೆ ಚಿತ್ರಶಬ್ದ. ಸಾಹಿತ್ಯ ಎಂದರೆ ಶಬ್ದ ಚಿತ್ರ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಜನರು ನಮ್ಮ ಸಂಪ್ರದಾಯವನ್ನೇ ಮೂಢನಂಬಿಕೆ ಎನ್ನುತ್ತಿದ್ದಾರೆ. ನಮ್ಮ ಕಲೆ, ವೇಷ, ಭಾಷೆ ಯಾವುದೂ ಕೀಳಲ್ಲ. ಹಾಗಂತ ಅಂದುಕೊಂಡರೆ ನಮ್ಮಲ್ಲಿರುವ ನಿಧಿಯನ್ನು ನಾವು ಕಳೆದುಕೊಳ್ಳಬೇಕಾದ ಸ್ಥಿತಿ ಉಂಟಾಗುತ್ತದೆ ಎಂದರು.
ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮ. ಕಲೆಗಳಲ್ಲಿ ಸಾಕಷ್ಟು ಕಲಾ ಪ್ರಕಾರಗಳಿವೆ. ಕಾವಿಕಲೆ ಮೇಲೆ ಜಾನಪದ, ಬುಡಕಟ್ಟು ಕಲೆಯ ಪ್ರಭಾವವೂ ಇದೆ. ಕರಾವರಳಿ ಭಾಗದಲ್ಲಿ ಕಾವಿಕಲೆ ಹೆಚ್ಚು ಪ್ರಚಲಿತದಲ್ಲಿದೆ. ಬಯಲು ಪ್ರದೇಶದಲ್ಲಿ ಸಿಗುವ ಕೆಮ್ಮಣ್ಣು ಹಾಗೂ ಕರಾವಳಿ ಭಾಗದಲ್ಲಿ ದೊರೆಯುವ ಕಾವಿ ಮಣ್ಣಿನಿಂದ ಈ ಕಲೆ ಅರಳುತ್ತದೆ ಎಂದರು. ಆರ್ಟ್ ಮ್ಯಾಟರ್ಸ್ ಪ್ರಾಂತ ಸಂಯೋಜಕ ಸಿ.ಚಂದ್ರಶೇಖರ್, ಜಿಲ್ಲಾ ಸಂಚಾಲಕ ಶಿವು, ಮೈವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಇದ್ದರು.