ಸ್ವಾತಂತ್ರೃ ಹೋರಾಟಗಾರರ ಮರು ಶೋಧನೆ ಅಗತ್ಯ: ಪ್ರೊ.ಅರವಿಂದ ಮಾಲಗತ್ತಿ ಅಭಿಮತ

3
Published on

ಮೈಸೂರು: ತಮ್ಮದೇ ರೀತಿಯಲ್ಲಿ ಸ್ವಾತಂತ್ರೃಕ್ಕಾಗಿ ಹೋರಾಡಿದವರ ಮರು ಶೋಧನೆ ಮಾಡುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಕಲಾಕೂಟ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಚಿತ್ರ ಕಲಾವಿದ ಯು.ಜಿ.ಮೋಹನ್‌ಕುಮಾರ್ ಆರಾಧ್ಯ ರಚಿಸಿರುವ ಸ್ವಾತಂತ್ರೃ ಹೋರಾಟಗಾರರ ಚಿತ್ರಕಲಾ ಪ್ರದರ್ಶನ ಹಾಗೂ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರೃ ಪೂರ್ವ ಹಾಗೂ ನಂತರದಲ್ಲಿ ದೇಶದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಸ್ವಾತಂತ್ರೃಕ್ಕಾಗಿ ಹೋರಾಟ, ಬಲಿದಾನವಾದ ಅನೇಕ ಮಹನೀಯರನ್ನು ಗುರುತಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯೂ ಮೂರು ಸಂಪುಟಗಳಲ್ಲಿ ಸ್ವಾತಂತ್ರೃ ಹೋರಾಟಗಾರರ ಹೆಸರನ್ನು ಪ್ರಕಟಪಡಿಸಿದೆ. ಆದರೆ ಸಣ್ಣ-ಸಣ್ಣ ಹೋರಾಟಗಳಲ್ಲಿ ಭಾಗಿಯಾಗಿರುವಂತಹ ಜನರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ದೊಡ್ಡ ಹೋರಾಟಗಾರರು, ಮುಂಚೂಣಿ ನಾಯಕರು, ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ನಾಯಕರ ಬಗ್ಗೆ ಇತಿಹಾಸದಲ್ಲಿ ಮಾಹಿತಿ ಸಿಗುತ್ತದೆ. ಆದರೆ ಎಲೆಮರೆಕಾಯಿಯಂತೆ ಹೋರಾಟ ಮಾಡಿದವರು ಸಾಕಷ್ಟು ಸಾಮಾನ್ಯ ಜನರು ಇದ್ದಾರೆ. ಅವರ ಬಗ್ಗೆ ಸಂಶೋಧನೆ ನಡೆಸಿ ಅವರ ಮಾಹಿತಿಯನ್ನು ನೀಡುವ ಅವಶ್ಯಕತೆ ಇದೆ ಎಂದರು.

ದೊಡ್ಡ ಹೋರಾಟಗಳು ಒಂದು ರೀತಿ ಹೆಮ್ಮರದಂತೆ. ಆದರೆ ತಾಯಿ ಬೇರು ಗಟ್ಟಿಯಾಗಲು ಸಣ್ಣ, ಸಣ್ಣ ಬೇರುಗಳು ಬೇಕು. ಹಾಗೆಯೇ ದೊಡ್ಡ ಹೋರಾಟಗಾರರು ಬೆಳೆಯಲು ಸಾಮಾನ್ಯ ಜನರ ಸಣ್ಣ ಹೋರಾಟವೂ ಮುಖ್ಯ. ಅಂತಹ ದಾಖಲೆ ಬಿಟ್ಟು ಹೋಗಬಾರದು ಎಂದು ಅಭಿಪ್ರಾಯಪಟ್ಟರು.

ಪೌರ ಕಾರ್ಮಿಕರನ್ನು ಕೂರಿಸಿಕೊಂಡು ಒಂದು ದಿನ ಅವರ ಪಾದ ತೊಳೆದು ಪೂಜೆ ಮಾಡುವುದರಿಂದ ಅವರ ಉದ್ಧಾರ ಸಾಧ್ಯವಿಲ್ಲ. ನಿಜವಾಗಿ ಕಾಳಜಿ ಇದ್ದರೆ ಕೌರಕಾರ್ಮಿಕರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡುವುದು ಅಗತ್ಯ ಎಂದರು.

ಯಾರೂ ಮಾಡದಂತಹ ಕೆಲಸವನ್ನು ಮಾಡುವ ಪೌರ ಕಾರ್ಮಿಕರ ಕಾರ್ಯ ಬಹಳ ಶ್ರೇಷ್ಠವಾದದ್ದು. ಅವರಿಗೆ ಕ್ಲಾಸ್-2 ಅಧಿಕಾರಿಯ ಸ್ಥಾನಮಾನವನ್ನು ನೀಡಿ, ಅದಕ್ಕೆ ತಕ್ಕಂತೆ ವೇತನ, ಇನ್ನಿತರ ಸೌಲಭ್ಯ ನೀಡಿದರೆ ನಿಜವಾಗಿ ಅವರ ಪಾದಪೂಜೆ ಮಾಡಿದಂತೆ ಎಂದು ಹೇಳಿದರು.

ನಗರಪಾಲಿಕೆ ಉಪ ಆಯುಕ್ತ (ಕಂದಾಯ) ಜಿ.ಎಸ್.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಹಿರಿಯ ಸಹಕಾರಿ ಕೆ.ರಘುರಾಂ ವಾಜಪೇಯಿ, ಆಲನಹಳ್ಳಿ ಶಾಶ್ವತ ಸೇವಾ ಶಾಲೆಯ ಕಾರ್ಯದರ್ಶಿ ಎಂ.ಆರ್.ಚೌದರಿ, ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಮಾರಾ, ಗಿರೀಶ್ ಉಪ್ಪಾರ್, ಎಸ್.ರವಿನಂದನ್, ಚಿತ್ರ ಕಲಾವಿದ ಯು.ಜಿ.ಮೋಹನ್‌ಕುಮಾರ್ ಇತರರಿದ್ದರು.

ಪೌರಕಾರ್ಮಿಕರಿಗೆ ಸನ್ಮಾನ:

ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಣೆ ಮಾಡುತ್ತಿರುವ ಹತ್ತು ಮಂದಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಆರಾಧ್ಯ ಅವರು ರಚಿಸಿರುವ ಸ್ವಾತಂತ್ರೃ ಹೋರಾಟಗಾರರ ಸುಮಾರು 74 ಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಪೆನ್ನಿನಲ್ಲಿ ರಚನೆ ಮಾಡಿರುವ ಗಾಂಧಿ, ನೆಹರು, ಪಟೇಲ್, ಭಗತ್‌ಸಿಂಗ್, ಕಿತ್ತೂರ ರಾಣಿ ಚನ್ನಮ್ಮ ಸೇರಿದಂತೆ ಇನ್ನೂ ಅನೇಕ ಮಹನೀಯರ ಚಿತ್ರಗಳನ್ನು ಭಾನುವಾರ ಸಂಜೆ ವರೆವಿಗೂ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net