ವಿದ್ಯುತ್ ಚಿತಾಗಾರ ಬಗ್ಗೆ ಪ್ರಚಾರ ಅಗತ್ಯ

gan (6)
Published on

ಕುಂದಾಪುರ: ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಹಿಂದು ರುದ್ರಭೂಮಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ಚಿತಾಗಾರದ ನಿರ್ವಹಣೆ ಕುರಿತು ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ಶುಕ್ರವಾರ ನಡೆಯಿತು.

ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುತ್ ಚಿತಾಗಾರದ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಪ್ರಚಾರ ಮಾಡಿ ಸೌಲಭ್ಯ ಪಡೆಯುವಂತೆ ಮಾಡಬೇಕು. ಪಕ್ಷಾತೀತವಾಗಿ ಶೀಘ್ರದಲ್ಲಿ ಮತ್ತೊಂದು ಸುತ್ತಿನ ಸಭೆ ಕರೆದು ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒ, ಅಧ್ಯಕ್ಷರು, ಸಹಕಾರಿ ವ್ಯವಸಾಯ ಸೇವಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಿ ಇದರ ಸಾಧಕ ಬಾಧಕಗಳ ಬಗ್ಗೆ ಸಮಾಲೋಚಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಬಹಳ ಮುಖ್ಯವಾಗಿ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲೂಕಿನ ಜನರ ಅನುಕೂಲಕ್ಕಾಗಿ ವಿದ್ಯುತ್ ಚಿತಾಗಾರ ಪ್ರಾರಂಭಿಸಲಾಗಿದೆ. ಇದರ ವ್ಯಾಪ್ತಿ ಹಾಗೂ ಪ್ರಚಾರವನ್ನು ಮತ್ತಷ್ಟು ವಿಸ್ತರಿಸಿ ಮಾಹಿತಿ ನೀಡಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಗ್ರಾಮ ಪಂಚಾಯಿತಿನ ಪ್ರಮುಖರು ವಿದ್ಯುತ್ ಚಿತಾಗಾರದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿದರು. ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿಕುಮಾರ ಹುಕ್ಕೇರಿ, ಕೋಟೇಶ್ವರ, ತೆಕ್ಕಟ್ಟೆ, ಗೋಪಾಡಿ, ಬೀಜಾಡಿ, ಕೋಣಿ ಗ್ರಾಮ ಪಂಚಾಯಿತಿಗಳ ಪಿಡಿಒ ಹಾಗೂ ಅಧ್ಯಕ್ಷರು, ಸದಸ್ಯರು, ಕೋಟೇಶ್ವರ ಹಿಂದು ರುದ್ರಭೂಮಿ ಸಮಿತಿ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net