

ಮೈಸೂರು: ಇತ್ತೀಚೆಗೆ ಮಂಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಎಷ್ಟರ ಮಟ್ಟಿಗೆ ಸಮಗ್ರವಾಗಿದೆ ಎನ್ನುವುದರ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಚಿಂತಕ ನಾ.ದಿವಾಕರ ಹೇಳಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದದಲ್ಲಿ ‘ಹೊಸ ಶಿಕ್ಷಣ ನೀತಿ-ಕನ್ನಡ ಭಾಷಾ ಬೆಳವಣಿಗೆ-ಸವಾಲುಗಳು’ ವಿಷಯ ಕುರಿತು ಮಾತನಾಡಿದರು.
ರಾಜ್ಯದಲ್ಲಿರುವ ಹಾಗೂ ಹೊರನಾಡಿನಲ್ಲಿರುವ ಕನ್ನಡಿಗರ ಹಿತ ಕಾಯುವ ದೃಷ್ಟಿಯಿಂದ ಈ ವಿಧೇಯಕ ಹೇಗೆ ನೆರವಾಗುತ್ತದೆ ಎನ್ನುವುದು ಗೊತ್ತಾಗಬೇಕಿದೆ. ಶಿಕ್ಷಣದಲ್ಲಿ ಭಾಷಾ ಕಲಿಕೆ, ಆಡಳಿತ ವ್ಯವಸ್ಥೆ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಗಳಲ್ಲಿ ಭಾಷೆಯ ಬಳಕೆ, ಕನ್ನಡೇತರರ ಕನ್ನಡ ಕಲಿಕೆ, ಸಾರ್ವಜನಿಕ ವಲಯದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಬಳಕೆ ಬಗ್ಗೆ ವಿಧೇಯಕದಲ್ಲಿ ಪ್ರತ್ಯೇಕವಾಗಿ ಪ್ರಾಶಸ್ತ್ಯ ಪಡೆಯಬೇಕಿತ್ತು. ಆದರೆ, ಮೇಲ್ನೋಟಕ್ಕೆ ಅದು ಕಾಣುವುದಿಲ್ಲ ಎಂದರು.
ಆಡಳಿತಾತ್ಮಕ ಕಾರಣಗಳಿಗಾಗಿ ಇಂಗ್ಲಿಷ್ ಬಳಸುವುದು ಅನಿವಾರ್ಯವಾದರೆ, ವೈಜ್ಞಾನಿಕ, ತಾಂತ್ರಿಕ ವಿಚಾರದಲ್ಲಿ ಇಂಗ್ಲಿಷ್ ಬಳಸಬಹುದು ಎಂದು ವಿಧೇಯಕದಲ್ಲಿ ಹೇಳಿರುವುದು ಸಾಕಷ್ಟು ಅಸಮಾಧಾನ ಉಂಟು ಮಾಡಿದೆ. ಆದ್ದರಿಂದ ಪ್ರಸ್ತುತ ಸಂದರ್ಭದಲ್ಲಿ ವಿಧೇಯಕದ ಈ ಅಂಶಗಳು ಪ್ರಧಾನವಾಗಿ ಚರ್ಚೆಯಾಗಬೇಕಿದೆ ಎಂದರು.
ಭಾಷೆ ಎನ್ನುವುದು ಮೂಲತಃ ಒಂದು ಸಂವಹನ ಮಾಧ್ಯಮ ಅಥವಾ ಸಂವಹನ ಸಾಧನ. ಮೌಖಿಕವಾಗಿ, ಸಾಂಘಿಕವಾಗಿ ಹಾಗೂ ಮೌನವಾಗಿಯೂ ಮನುಷ್ಯರ ನಡುವೆ ಸಂವಹನದ ಸಾಧ್ಯತೆ ಇದೆ. ಆದರೂ, ಆಧುನಿಕ ಮಾನವ ಭಾಷೆ ಎನ್ನುವ ಒಂದು ಸಾಧನವನ್ನು ಬೆಳೆಸಿಕೊಂಡು ಬಂದಿದ್ದಾನೆ ಎಂದರು.
ಮಾನವನ ಅಭ್ಯುದಯದ ಹಾದಿಯಲ್ಲಿ ಭಾಷೆ ಎನ್ನುವುದು ಪ್ರಧಾನ ಸಂವಹನ ಸಾಧನವಾಗುವ ಜತೆಗೆ ವಿವಿಧ ನಾಗರಿಕತೆಗಳ ಸಮನ್ವಯ, ಸಮ್ಮಿಲನ ಹಾಗೂ ಸಂಘರ್ಷಕ್ಕೂ ಕಾರಣವಾಗಿರುವುದನ್ನು ನೋಡಿದ್ದೇವೆ. ಭೌಗೋಳಿಕ ರಾಷ್ಟ್ರಗಳ ಪರಿಕಲ್ಪನೆ, ಆಧುನಿಕ ನಾಗರಿಕತೆ ಆವರಿಸಿಕೊಂಡಂತೆ, ಜನಾಂಗಗಳ ಹಾಗೂ ಜನಾಂಗಿಯ ಭಾಷೆಗಳು ಕೂಡ ತಮ್ಮದೆ ಆದ ಅಸ್ತಿತ್ವ ಗಳಿಸಿವೆ. ಕ್ರಮೇಣ ಅವು ಪ್ರಭುತ್ವದ ಭಾಷೆಯಾಗಿ ಬೆಳೆದಿವೆ ಎಂದರು.
ಭಾರತದಂತಹ ಒಕ್ಕೂಟದ ದೇಶಗಳಲ್ಲಿ ಸಾಂಸ್ಕೃತಿಕ ವೈವಿಧ್ಯತೆಗಳ ಜತೆಗೆ ಭಾಷಾ ವೈವಿಧ್ಯತೆಯೂ ಇದೆ. ಆದ್ದರಿಂದ ಇಲ್ಲಿ ಭಾಷೆ ಕೇವಲ ಸಂವಹನ ಸಾಧನವಾಗಿ ಉಳಿಯುವುದಿಲ್ಲ. ಬದಲಾಗಿ ಪ್ರಾದೇಶಿಕ, ಭೌಗೋಳಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿ ನೆಲೆಗಳಲ್ಲಿ ಜನ ಜೀವನದ ಜತೆ ತನ್ನ ಪ್ರಭಾವವನ್ನು ಬೀರುತ್ತದೆ ಎಂದರು. ಹಿರಿಯ ಹೋರಾಟಗಾರರಾದ ತಾಯೂರು ವಿಠ್ಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ, ಬಿ.ಎ.ಶಿವಶಂಕರ್, ಪ್ರಾಧ್ಯಾಪಕ ಡಾ.ಮುಳ್ಳೂರು ನಂಜುಂಡಸ್ವಾಮಿ, ಅರವಿಂದ ಶರ್ಮಾ, ಪರಿಸರವಾದಿ ಭಾನು ಮೋಹನ್ ಇತರರಿದ್ದರು. ಬಳಿಕ ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹತ್ತಾರು ಕವಿಗಳು ತಮ್ಮ ಕವನ ವಾಚನ ಮಾಡಿದರು.