

ಮೈಸೂರು: ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಗೆ ವಿಫುಲ ಅವಕಾಶಗಳು ಇದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ ‘ಸ್ಕಿಲ್ ಕನೆಕ್ಟ್-2023’ ಉದ್ಯಮಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಹೊಸ ಕೈಗಾರಿಕೆಗಳು ಪ್ರಾರಂಭಗೊಳ್ಳುತ್ತಿವೆ. ಆದರೆ, ಕೈಗಾರಿಕೆಗಳು ನಿರೀಕ್ಷಿಸುವಷ್ಟು ಕೌಶಲ್ಯದಿಂದ ಕೂಡಿದ ಮಾನವ ಸಂಪನ್ಮೂಲ ದೊರೆಯುತ್ತಿಲ್ಲ. ಹೀಗಾಗಿ ಯುವಜನರು ಕೌಶಲ್ಯ ತರಬೇತಿ ಪಡೆಯುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೌಶಲ್ಯ ತರಬೇತಿ ಪಡೆಯುವುದು ಅವಶ್ಯಕ. ಕೇವಲ ಪದವಿ ಪಡೆದರೆ ಮಾತ್ರ ಉದ್ಯೋಗ ದೊರೆ ಯುವುದಿಲ್ಲ. ಇದರ ಜತೆಗೆ ಕೌಶಲ್ಯ ಕೂಡ ಇದ್ದರೆ ತಕ್ಷಣ ಉದ್ಯೋಗ ಪಡೆದುಕೊಳ್ಳಬಹುದು. ‘ನನಗೆ ಗೊತ್ತಿಲ್ಲ, ನನ್ನಿಂದ ಆ ಕಾರ್ಯ ಸಾಧ್ಯವಿಲ್ಲ’ ಎಂಬ ಮನಸ್ಥಿತಿಯಿಂದ ಯುವಜನರು ಹೊರಬರಬೇಕು ಎಂದು ಕರೆ ನೀಡಿದರು.
ಪ್ರತಿನಿತ್ಯ ನಮ್ಮ ಕಚೇರಿಗೆ 20 ರಿಂದ 30 ಪದವೀಧರರು ಡಾಟಾ ಎಂಟ್ರಿ ಕೆಲಸವನ್ನಾದರೂ ಕೊಡಿಸಿ ಎಂದು ಕೇಳಿಕೊಂಡು ಬರುತ್ತಾರೆ. ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ, ಕೌಶಲ್ಯದಿಂದ ಕೂಡಿದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಹಾಗಾಗಿ ಗುಣಮಟ್ಟದ ಅಭ್ಯರ್ಥಿಗಳನ್ನು ತಯಾರು ಮಾಡುವ ಕಾರ್ಯ ಆಗಬೇಕಾಗಿದೆ. ಭಾಷಾ ಸಮಸ್ಯೆಯಿಂದ ಕೆಲವರಿಗೆ ಉದ್ಯೋಗ ದೊರೆ ಯುತ್ತಿಲ್ಲ. ಹಾಗಾಗಿ ಯುವಜನರು ಕೌಶಲ್ಯದ ಜತೆಗೆ ಆಂಗ್ಲಭಾಷೆ ಕಲಿಕೆಯ ಕಡೆಗೂ ಗಮನ ಹರಿಸಬೇಕು ಎಂದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು 2017ರಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿದ ನಂತರ ನಿಗಮವು ಉದ್ಯಮಿಗಳು ಮತ್ತು ಅಭ್ಯರ್ಥಿಗಳನ್ನು ಒಂದು ವೇದಿಕೆಯಡಿ ತರುವ ಕಾರ್ಯ ಮಾಡುತ್ತಿದೆ. ಇದುವರೆಗೆ 61 ಸಾವಿರ ಅಭ್ಯರ್ಥಿಗಳು ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದ ಪದವಿ, ಇಂಜಿನಿಯರಿಂಗ್ ಕಾಲೇಜುಗಳು, ಐಟಿಐ, ಡಿಪ್ಲೊಮಾ ಕಾಲೇಜುಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ಉದ್ಯಮಿಗಳಿಗೆ ಅನುಕೂಲವಾಗುವ ರೀತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಗಮ ಸಹಕಾರ ನೀಡುತ್ತಿದೆ. ಅಲ್ಲದೆ, ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಅಭ್ಯರ್ಥಿಗಳು ಪೋರ್ಟಲ್‌ನಲ್ಲಿ ತಮ್ಮ ಬಯೋಡೇಟಾವನ್ನು ಅಪ್‌ಲೋಡ್ ಮಾಡಿದರೆ ಅದನ್ನು ಉದ್ಯಮಿಗಳು ಪರಿಶೀಲಿಸಿ ತಮಗೆ ಸೂಕ್ತ ಅನ್ನಿಸುವ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸುತ್ತಾರೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಸವಿತಾ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾರಾಯಣಮೂರ್ತಿ ಹಾಗೂ ಇತರರು ಇದ್ದರು.