

ಹೊಸನಗರ: ಶರಣ ಸಾಹಿತ್ಯವು ಸರಳ ಕನ್ನಡದಲ್ಲಿರುವ ಬೃಹತ್ ವೈಚಾರಿಕ ಗ್ರಂಥಗಳ ಮಾಲೆ ಎಂದು ಸಾಹಿತಿ ಸೊನಲೆ ಶ್ರೀನಿವಾಸ ಹೇಳಿದರು.
ಶನಿವಾರ ಪಟ್ಟಣದ ಕುವೆಂಪು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ರಾಜ್ಯ ಹಾಗೂ ತಾಲೂಕು ಘಟಕ ಹಮ್ಮಿಕೊಂಡಿದ್ದ ವಚನ ದಿನ ಹಾಗೂ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯಕ್ಕೆ ಡಾ. ರಾಜೇಂದ್ರ ಸ್ವಾಮೀಜಿಯವರ ಕೊಡುಗೆ ಕುರಿತಂತೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಇಲಿಯಾಸ್ ವಿಚಾರ ಮಂಡನೆ ಮಾಡಿದರು. ವಚನಕಾರರ ಸಾಹಿತ್ಯದಲ್ಲಿ ಕಾಯಕ ಮತ್ತು ದಾಸೋಹ ಕುರಿತಂತೆ ಚನ್ನಸಬಸಪ್ಪ ಗೌಡ ಮಾತನಾಡಿದರು. ಸೋನಲೆ ದಾನಮ್ಮ-ಬೊಮ್ಮನಾಯ್ಕ ಹಾಗೂ ಹೊಸಕೋಟೆ ಸರೋಜಮ್ಮ-ಹಾಲಪ್ಪ ಗೌಡ ಇವರು ನೀಡಿದ ದತ್ತಿನಿಧಿಯಿಂದ ಉಪನ್ಯಾಸ ನಡೆಯಿತು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದುಮ್ಮಾ ರೇವಣಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ದೇವಾನಂದ್ ಇವರು ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಶಿಕ್ಷಕರ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಪಪಂ ಸದಸ್ಯ ಗಾಯತ್ರಿ ನಾಗರಾಜ್ ಇದ್ದರು. ಪರಿಷತ್ತಿನ ಕಾರ್ಯದರ್ಶಿ ಗಂಗಾಧರಯ್ಯ ಸ್ವಾಗತಿಸಿದರು. ರೂಪಾ ವಂದಿಸಿದರು.