ಬೇಸಿಗೆ ರೋಗಗಳು ಉಲ್ಬಣಿಸುವ ಭೀತಿ

bisilu
Published on

ಅವಿನಾಶ್ ಜೈನಹಳ್ಳಿ ಮೈಸೂರು
ಬಿಸಿಲಿನ ಪ್ರಖರತೆ ಏರುತ್ತಿರುವುದರಿಂದ ಜಿಲ್ಲೆಯಲ್ಲಿ ಬೇಸಿಗೆಯ ರೋಗಗಳು ಉಲ್ಬಣಿಸುವ ಭೀತಿ ಎದುರಾಗಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕಿದೆ.

ಜಿಲ್ಲೆಯಲ್ಲಿ ಫೆಬ್ರವರಿ ಮೂರನೇ ವಾರದಲ್ಲಿಯೇ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಬಾರಿ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಉಷ್ಣಾಂಶದ ಪ್ರಮಾಣ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬೇಸಿಗೆ ಕಾಲದಲ್ಲಿ ಕಾಲರಾ, ಟೈಫಾಯ್ಡ, ಮಲೇರಿಯಾ, ಚರ್ಮ ಕಾಯಿಲೆ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಸಾಂಕ್ರಾಮಿಕ ರೋಗಗಳ ಪ್ರಮುಖ ಲಕ್ಷಣಗಳು. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಬಡಾವಣೆ/ಗ್ರಾಮದಲ್ಲಿ ಒಬ್ಬರಿಗೆ ಸಾಂಕ್ರಾಮಿಕ ರೋಗ ತಗುಲಿದರೂ ಮುಂದೆ ಹೆಚ್ಚು ಜನರಿಗೆ ಹರಡುವ ಸಾಧ್ಯತೆಗಳಿರುತ್ತವೆ.

ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಹೆಚ್ಚಾಗಿ ರೋಗಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಕಾಲದಲ್ಲಿ ಅವರನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಈ ಬಗ್ಗೆ ಅರಿವು ಮೂಡಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಿದ್ದಾರೆ.

ಸಾಂಕ್ರಾಮಿಕ ರೋಗ ತಡೆ ಹೇಗೆ?

ಕುದಿಸಿ ಆರಿಸಿದ ನೀರು, ಶುದ್ಧವಾದ ಆಹಾರ ಪದಾರ್ಥ ಸೇವಿಸಬೇಕು. ಬಯಲಲ್ಲಿ ಮಲ ವಿಸರ್ಜನೆ ಮಾಡದೆ ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಹೋಟೆಲ್ಗಳಲ್ಲಿ ಶುದ್ಧವಾದ ಆಹಾರ ಮತ್ತು ಕುಡಿಯಲು ಬಿಸಿ ನೀರು ನೀಡಬೇಕು. ತ್ಯಾಜ್ಯ ವಸ್ತುಗಳನ್ನು ಗ್ರಾಮದ ಹೊರಗಡೆ ನಿಗದಿತ ಸ್ಥಳದಲ್ಲಿ ಹಾಕಬೇಕು. ಗ್ರಾಮದ/ಬಡಾವಣೆಯ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತೆರೆದಿಟ್ಟ ತಿಂಡಿ-ತಿನಿಸುಗಳು ಮತ್ತು ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಊಟಕ್ಕೆ ಮುಂಚೆ ಹಾಗೂ ಮಲ ವಿಸರ್ಜನೆ ನಂತರ ಕೈಯನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ಸಡಿಲ ಹಾಗೂ ಹಗುರವಾಗಿರುವ ಹತ್ತಿ ಬಟ್ಟೆಗಳನ್ನು ತೊಡಬೇಕು.

ನೀರಿಗೆ ಉಪ್ಪು, ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯಬೇಕು. ಬೆಳಗ್ಗೆ ಅಥವಾ ಸಂಜೆಯಾದರೂ ತಣ್ಣೀರು ಸ್ನಾನ ಮಾಡಬೇಕು. ಬಿಸಿ ವಾತಾವರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಶ್ರಮದ ಕೆಲಸ ಮತ್ತು ವ್ಯಾಯಾಮ ಮಾಡಬಾರದು. ಹಣ್ಣಿನ ರಸ, ಮಜ್ಜಿಗೆ, ಲಸ್ಸಿ, ನಿಂಬೆಹಣ್ಣಿನ ಪಾನೀಯ ಕುಡಿಯಬೇಕು. ಬೇಕರಿ ಪದಾರ್ಥ, ಪಾನೀಪುರಿ, ಗೋಬಿ ಮತ್ತಿತರ ತಿಂಡಿಗಳನ್ನು ತಿನ್ನಬಾರದು.
ನೀರಿನಾಂಶ ಜಾಸ್ತಿ ಇರುವ ಸೌತೆಕಾಯಿ ಹೆಚ್ಚಾಗಿ ಸೇವಿಸಬೇಕು. ಟೀ, ಕಾಫಿ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು ಅಥವಾ ತ್ಯಜಿಸಿದರೆ ಇನ್ನೂ ಒಳ್ಳೆಯದು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಗೆ ಕ್ಯಾಪ್, ಮಹಿಳೆಯರು ಸ್ಕಾರ್ಪ್ ಧರಿಸಬೇಕು ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ರೈತರು ಹೀಗೆ ಮಾಡಿ

ಬಿಸಿಲಿನ ತಾಪದಿಂದಾಗುವ ಹಾನಿ ತಪ್ಪಿಸಲು ರಾಸುಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ಮಧ್ಯಾಹ್ನದ ವೇಳೆ ಕೆರೆ, ಹೊಂಡ ಅಥವಾ ಹಳ್ಳಗಳಲ್ಲಿ ಈಜಲು ಬಿಡಬೇಕು ಅಥವಾ ದಿನಕ್ಕೆ 2-3 ಬಾರಿ ಮೈಮೇಲೆ ನೀರು ಹಾಕಬೇಕು. ಕೊಟ್ಟಿಗೆಯ ವಾತಾವರಣ ತಂಪಾಗಿರುವಂತೆ ನೋಡಿಕೊಳ್ಳಬೇಕು. ಆದಷ್ಟು ಜಮೀನಿನಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಕೆಲಸ ಮಾಡಬೇಕು. ಮಧ್ಯಾಹ್ನದ ವೇಳೆ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು.

ಬೇಸಿಗೆ ಕಾಲದ ರೋಗಗಳು ಉಲ್ಬಣಿಸದಂತೆ ಇಲಾಖೆಯಿಂದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲೂ ಅರಿವು ಮೂಡಿಸಲಾಗುತ್ತಿದೆ. ಚರ್ಮರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಬೇರೆ ಬೇರೆ ಇಲಾಖೆಗಳ ಸಹಕಾರದೊಂದಿಗೆ ಕುಡಿಯುವ ನೀರು ಪರೀಕ್ಷೆ ಮಾಡಲಾಗುತ್ತಿದೆ. ಕೆಮ್ಮು, ನೆಗಡಿ, ವಾಂತಿ, ಸುಸ್ತು, ಭೇದಿ ಬಗ್ಗೆ ಎಚ್ಚರ ವಹಿಸಬೇಕು.ಡಾ.ಪಿ.ಸಿ.ಕುಮಾರಸ್ವಾಮಿಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net