

ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿ ‘ಮುಖ್ಯಮಂತ್ರಿ ಅಭ್ಯರ್ಥಿ’ ವಿಷಯವಾಗಿ ಶೀತಲ ಸಮರ ಮುಂದುವರಿದಿದೆ. ಅಂತೆಯೆ, ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ‘ಸಿದ್ದರಾಮಯ್ಯ ಮತ್ತೆ ಸಿಎಂ’ ಎನ್ನುವ ಜಪ ಜೋರಾಗಿಯೇ ನಡೆಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘ, ಮೈಸೂರು ನಗರ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ‘ಮುಂದಿನ ಸಿಎಂ’ ಜಪ ಕೇಳಿಬಂತು. ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು 75 ಕೆಜಿ ತೂಕದ ಕೇಕ್ ಮಾಡಿಸಿ, ಹುಟ್ಟುಹಬ್ಬದ ಶುಭಾಶಯ ಕೋರಿದರು. ಅಲ್ಲದೆ, ಕೇಕ್ ಮೇಲೆ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಬರೆಸಿದ್ದು ವಿಶೇಷವಾಗಿತ್ತು. ಸಿದ್ದರಾಮಯ್ಯ ಅವರು ಕೇಕ್ ಅನ್ನು ಖುಷಿಯಿಂದಲೇ ಕತ್ತರಿಸಿದರು.
ಇದೇ ವೇಳೆ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು.
ಇನ್ನು ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ಕಲಾಮಂದಿರದಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ವೇದಿಕೆ ಮೇಲಿದ್ದ ಗಣ್ಯರು ಕೂಡ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಜೈಕಾರ ಕೂಗಿದರು. ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಅವರು, ‘ಭಾವಿ ಸಿಎಂ ಸಿದ್ದರಾಮಯ್ಯ’ ಎಂದು ಭಾಷಣ ಪ್ರಾರಂಭಿಸಿದರು. ಸಭಾಂಗಣದಲ್ಲಿ ಸೇರಿದ್ದ ಸಾರ್ವಜನಿಕರು ಅದಕ್ಕೆ ಧ್ವನಿಗೂಡಿಸಿದರು.
ಬೆಳ್ಳಿ ಕತ್ತಿ ಕೊಡುಗೆ:
ಸಿದ್ದರಾಮಯ್ಯ ಅವರಿಗೆ 2 ಲಕ್ಷ ರೂ. ಮೌಲ್ಯದ ಬೆಳ್ಳಿ ಕತ್ತಿಯನ್ನು ಕೊಡುಗೆಯಾಗಿ ನೀಡಲಾಯಿತು. ಆ ಕತ್ತಿಯನ್ನು ಹಿಡಿದು ಒಮ್ಮೆ ನೋಡಿದ ಸಿದ್ದರಾಮಯ್ಯ, ಅದನ್ನು ಮೇಲೆತ್ತಿ ಝಳಪಿಸಿದಾಗ ಸಭಾಂಗಣದಲ್ಲಿದ್ದ ಅಭಿಮಾನಿಗಳು ಶಿಳ್ಳೆ-ಕೇಕೆಗಳನ್ನು ಮೊಳಗಿಸಿದರು.
ಶ್ರೀ ಶಿವಾನಂದಪುರಿ ಸ್ವಾಮೀಜಿ, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಇತರರಿದ್ದರು.