

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯ 2020-21ನೇ ಸಾಲಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾನ್ಯತೆ ಸಿಗುವುದು ಬಹುತೇಕ ಕಷ್ಟ!
ಏಕೆಂದರೆ, ಯುಜಿಸಿ ಕಳೆದ ಬಾರಿ ನೀಡಿದ ಷರತ್ತುಬದ್ಧ ಮಾನ್ಯತೆಗೆ ತಕ್ಕಂತೆ ವಿವಿ ನಡೆದುಕೊಂಡಿಲ್ಲ. ಯುಜಿಸಿ ನಿಯಮಗಳನ್ನು ಪಾಲಿಸದೇ ಇರುವುದರಿಂದ ಮುಂದಿನ ಬಾರಿಗೆ ಮಾನ್ಯತೆ ಸಿಗುವುದು ಕಷ್ಟ. ಈಗಾಗಲೇ ಯುಜಿಸಿ ಡಿ.30ರಂದು ಬಿಡುಗಡೆ ಮಾಡಿರುವ 2020-21ರ ಶೈಕ್ಷಣಿಕ ಸಾಲಿನ ಪಟ್ಟಿಯಲ್ಲಿ ಬೆಂಗಳೂರು ವಿವಿಯ ಹೆಸರಿಲ್ಲ. ಇದು ಮುಂದಿನ ಶೈಕ್ಷಣಿಕ ಮಾನ್ಯತೆಯ ಮೇಲೆ ಕರಿನೆರಳು ಬೀರಿದೆ.
ಯುಜಿಸಿ ಕಳೆದ ವರ್ಷದ ಮಾನ್ಯತೆ ನೀಡುವಾಗ ಅಧ್ಯಯನ ಕೇಂದ್ರ ಆರಂಭಿಸಬೇಕು, ವಿಷಯ ಸಂಯೋಜಕರ ನೇಮಕ ಮಾಡಬೇಕು, ವಿಷಯಕ್ಕೆ ತಕ್ಕಂತೆ ತರಗತಿಗಳಿರಬೇಕು, ಪ್ರಯೋಗಾಲಯಗಳಿರಬೇಕು ಎಂಬಿತ್ಯಾದಿ ನಿಯಮಗಳನ್ನು ತಿಳಿಸಿತ್ತು.
ಇದರ ಆಧಾರದ ಮೇಲೆ 2018-19 ಮತ್ತು 19-20ನೇ ಸಾಲಿಗೆ ಮಾನತ್ಯೆ ನೀಡಿತ್ತು. ಇದೀಗ 2020-21ನೇ ಸಾಲಿಗೆ 11 ಕೋರ್ಸ್ ಗಳಿಗೆ ಹೊಸದಾಗಿ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಬೇಕಿತ್ತು. ಇದಕ್ಕೆ ಡಿ.11 ಕೊನೇ ದಿನವಾಗಿತ್ತು. ವಿವಿಯು ಕೊನೆ ಕ್ಷಣದಲ್ಲಿ ವರದಿ ಸಲ್ಲಿಸಿದ್ದು, ಯುಜಿಸಿ ಹೇಳಿದನ್ನು ಪಾಲಿಸದೆಯೇ ಸುಳ್ಳು ವರದಿಯನ್ನು ಯುಜಿಸಿಗೆ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ವಿವಿಯ ಆರ್ಥಿಕ ಕೇಂದ್ರ: ಬೆಂವಿವಿ ದೂರ ಶಿಕ್ಷಣ ನಿರ್ದೇಶನಾಲಯ ಒಂದು ಕಾಲದಲ್ಲಿ ವಿವಿಗೆ ಆರ್ಥಿಕ ಸಂಪತ್ತು ನೀಡುವ ಆದಾಯ ಕೇಂದ್ರವೂ ಆಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ನಷ್ಟದಲ್ಲೇ ಕಾಲ ಕಳೆಯುವಂತಾಗಿದೆ. ಪ್ರವೇಶ ಪಡೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಸಹ ಕ್ಷೀಣಿಸಿದೆ. ಕಳೆದ ವರ್ಷ 7 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 2019-20ನೇ ಸಾಲಿನಲ್ಲಿ 4 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಯುಜಿಸಿ ಸೂಚನೆಗಳು
ಅಧ್ಯಯನ ಕೇಂದ್ರ ಆರಂಭವಾಗಿಲ್ಲ, ಸಂಯೋಜಕರ ನೇಮಕವಾಗಿಲ್ಲ. ಯುಜಿಸಿಗೆ ವರದಿಗೆ ಸಲ್ಲಿಕೆ ಮಾಡಿದ್ದೇವೆ. ಮಾನ್ಯತೆ ನೀಡುವುದು ಯುಜಿಸಿಗೆ ಬಿಟ್ಟಿದ್ದು. | ಪ್ರೊ.ಬಿ.ಸಿ.ಮೈಲಾರಪ್ಪ ನಿರ್ದೇಶಕರು, ಬೆಂ.ದೂರ ಶಿಕ್ಷಣ
ಅಧ್ಯಯನ ಕೇಂದ್ರಕ್ಕೆ ಗ್ರಹಣ
ಒಂದೂವರೆ ವರ್ಷದಿಂದ ಬೆಂ.ವಿವಿ ಅಧ್ಯಯನ ಕೇಂದ್ರ ತೆರೆಯುವುದರಲ್ಲೇ ಕಾಲಹರಣ ಮಾಡುತ್ತಿದೆ. ಇದರಿಂದಾಗಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಅನಿವಾರ್ಯವಾಗಿ ಜ್ಞಾನಭಾರತಿ ಕೇಂದ್ರಕ್ಕೆ ಭೇಟಿ ನೀಡಬೇಕಿದೆ. 15 ಅಧ್ಯಯನ ಕೇಂದ್ರ ಗುರುತಿಸಿದ್ದು, ಯಾವ ಕೇಂದ್ರವನ್ನೂ ಉದ್ಘಾಟನೆ ಮಾಡಿಲ್ಲ. ಅಧ್ಯಯನ ಕೇಂದ್ರದ ನೆಪವೊಡ್ಡಿ ವಿಷಯ ಸಂಯೋಜಕರ ನೇಮಕವನ್ನು ವಿವಿ ಸ್ಥಗಿತಗೊಳಿಸಿದೆ. ಇದು ಪ್ರವೇಶಾತಿಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.
ಸರ್ಕಾರಿ ಕಾಲೇಜುಗಳಲ್ಲಿ ಐದು ಅಧ್ಯಯನ ಕೇಂದ್ರ ತೆರೆಯಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಆರಂಭ ಮಾಡುತ್ತೇವೆ. ಯುಜಿಸಿ ಮಾನ್ಯತೆ ನೀಡುತ್ತದೆ ಎಂಬ ಭರವಸೆ ನಮಗಿದೆ. |ಕೆ.ಆರ್.ವೇಣುಗೋಪಾಲ್ ಬೆಂ.ವಿವಿ ಕುಲಪತಿ
| ದೇವರಾಜ್ ಎಲ್