

ಮಡಿಕೇರಿ: ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸುವ ಕೊಡವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆರೋಪಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್‌ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ತಮಗೆ ಒಪ್ಪುವ ಉಡುಪನ್ನು ತೊಡುವ ಮತ್ತು ಆಹಾರವನ್ನು ಸೇವಿಸುವ ಸ್ವಾತಂತ್ರ್ಯವನ್ನು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬರಿಗೂ ನೀಡಿದೆ. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಬಾರದು ಎನ್ನುವ ಸರ್ವಾಧಿಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿರುವ ಸೂಕ್ಷ್ಮ ಜನಾಂಗದ ಕೊಡವರು ದೇವಾಲಯಗಳಿಗೆ ಕುಪ್ಯಚೇಲೆಯನ್ನು ಧರಿಸಿ ಪ್ರವೇಶಿಸುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ತಡೆಯುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ಸಂಘಟನೆಗಳು ಮುಂದಿನ ದಿನಗಳಲ್ಲಿ ನಡೆಸುವ ಕೊಡವರ ನಡೆ ಕಟ್ಟೆಮಾಡು ಕಡೆ ಬೃಹತ್ ಜಾಥಾಕ್ಕೆ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.