

ಶಿವಮೊಗ್ಗ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಟೀಕೆ ಮಾಡುವ ಮೂರು ಮಾದರಿಯ ಹುಚ್ಚರು ರಾಜ್ಯದಲ್ಲಿದ್ದಾರೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಹುಚ್ಚು ವಾಸಿಯಾದವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೂರ್ಣ ಹುಚ್ಚರು. ಇಬ್ಬರನ್ನೂ ಹೊರತುಪಡಿಸಿ ಅರೆ ಹುಚ್ಚರ ತಂಡ ಕಾಂಗ್ರೆಸ್‌ನಲ್ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಬುದ್ಧಿಭ್ರಮಣೆ ಆದ ಮೂರು ವರ್ಗದವರು ಇದ್ದಾರೆ. ಬುದ್ಧಿಭ್ರಮಣೆ ಆದವರಲ್ಲಿ ಕೆಲವರು ಒಳ್ಳೆಯದನ್ನೂ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಆ ಸಾಲಿಗೆ ಸೇರಿದವರು. ಆಪರೇಷನ್ ಸಿಂಧೂರ ಬಗ್ಗೆ ಆರಂಭದಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಹುಚ್ಚು ವಾಸಿಯಾದ ನಂತರ ಅವರೇ ಹಣೆಗೆ ಸಿಂಧೂರ ಇಟ್ಟುಕೊಂಡರು. ಹಾಗಾಗಿ ಅವರು ಬುದ್ಧಿಭ್ರಮಣೆ ಆಗಿಲ್ಲ. ಬದಲಾಗಿ ಅವರಿಗೆ ಬುದ್ಧಿ ಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಭಾರತೀಯರ ಹತ್ಯೆ ಆದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಬಳಿಕ ವರಸೆ ಬದಲಿಸಿದ್ದಾರೆ. ಅವರಿಗೆ ಪಾಕ್ ಪರವಾಗಿರುವ ಮುಸ್ಲಿಮರಿಂದ ಒತ್ತಡಗಳು ಬಂದಿರಬೇಕು. ಅದಕ್ಕಾಗಿ ಆ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಖರ್ಗೆ ಪೂರ್ಣ ಹುಚ್ಚರ ಸಾಲಿಗೆ ಸೇರುತ್ತಾರೆ ಎಂದರು.
ರಾಜ್ಯದಲ್ಲಿ ಅರೇ ಹುಚ್ಚರು ಎಂಬ ಮೂರನೇ ವರ್ಗವೂ ಇದೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಮತ್ತು ಶಾಸಕ ಕೊತ್ತೂರು ಮಂಜುನಾಥ ಮೂರನೇ ವರ್ಗದಲ್ಲಿದ್ದಾರೆ. ಇವರು ಒಬ್ಬೊಬ್ಬರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳು ದೇಶದ್ರೋಹಿಗಳನ್ನೂ ಮೀರಿಸುವಂತಿದೆ ಎಂದು ಕಿಡಿಕಾರಿದರು.
ದೇಶದ ಕಾನೂನಿನ ಬಗ್ಗೆ ಹಗುರವಾಗಿ ಮಾತನಾಡುವ ಅಥವಾ ನಾಲಿಗೆ ಹರಿಬಿಡುವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಠಿಣ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ. ಕಾನೂನು ಬಿಗಿಯಾದರೆ ಮಾತ್ರ ದೇಶ, ಇಲ್ಲಿನ ಕಾನೂನಿನ ಬಗ್ಗೆ ಟೀಕೆ ಮಾಡುವವರಿಗೆ ಬುದ್ಧಿ ಕಲಿಸಬಹುದು ಎಂದರು.