

ಶಿವಮೊಗ್ಗ: ಲೋಕಸಭೆ ಚುನಾವಣೆ ಹುಸ್ತಿಲಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಬಣ ಸೃಷ್ಟಿಯಾಗಿವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಒಂದೊಂದು ಬಣಗಳಾಗಿದ್ದು ಮೂರು ಬಣಗಳ ಕಿತ್ತಾಟದ ನಡುವೆ ಬಿಜೆಪಿ ಗೆಲುವು ಸುಲಭವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜ್ಯದ 28ಕ್ಕೆ ಕ್ಷೇತ್ರಗಳನ್ನು ಎರಡು ಬಾರಿ ಸುತ್ತಿ ಬಂದಿದ್ದೇನೆ. 28 ಕ್ಷೇತ್ರಗಳನ್ನೂ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಮತದಾರರು ತಲೆಕೆಡಿಸಿಕೊಳ್ಳಬಾರದು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರಂಟಿ. ಹಾಗಾಗಿ ದೇಶದಲ್ಲಿ ಯಾವ ಗ್ಯಾರಂಟಿಗಳು ವರ್ಕ್ ಆಗುವುದಿಲ್ಲ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಬಿಜೆಪಿ ಮತ್ತು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತಪ್ಪು ಮಾಡಿದವರಿಗೆ ಕಾನೂನು ಇದೆ. ಶಿಕ್ಷೆ ಆಗುತ್ತದೆ. ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದಾರೆ. ತನಿಖೆ ನಡೆದು ತಪ್ಪಿತಸ್ಥ ಎಂಬುದು ಸಾಬೀತಾದರೆ ಶಿಕ್ಷೆ ಆಗಲಿದ್ದು ಆ ಬಗ್ಗೆ ಹೆಚ್ಚಿನ ವಿಷಯ ಪ್ರಸ್ತಾಪ ಮಾಡುವುದಿಲ್ಲ ಎಂದರು. ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಘಟನೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೇ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.