

ಎನ್.ಆರ್.ಪುರ: ರಾಜ್ಯದಲ್ಲಿ ಭದ್ರಾ, ಬಂಡಿಪುರ, ನಾಗರಹೊಳೆ, ದಾಂಡೇಲಿ, ಬಿಳಿಗಿರಿ ರಂಗನಾಥ ಟೈಗರ್ ಸೇರಿ 5 ಹುಲಿ ಸಂರಕ್ಷಣಾ ಅಭಯಾರಣ್ಯಗಳಿವೆ ಎಂದು ಕೊಪ್ಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ತಿಳಿಸಿದರು.
ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಪ್ಪ ಅರಣ್ಯ ವಿಭಾಗದ ಎನ್.ಆರ್.ಪುರ ಹಾಗೂ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹುಲಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ 2900, ರಾಜ್ಯದಲ್ಲಿ 521, ಭದ್ರಾ ಹುಲಿ ಸಂರಕ್ಷಣಾ ಅಭಯಾರಣ್ಯದಲ್ಲಿ 30 ಹುಲಿಗಳಿವೆ. 13 ರಾಷ್ಟ್ರಗಳಲ್ಲಿ ಹುಲಿಗಳು ಇದ್ದು ದಕ್ಷಿಣ ಏಷ್ಯಾ ಖಂಡದ ದೇಶಗಳಲ್ಲಿ ಹೆಚ್ಚಿವೆ. ಸ್ವಾತಂತ್ರೃಕ್ಕೂ ಮುನ್ನ ಭಾರತದಲ್ಲಿ ಲಕ್ಷಾಂತರ ಹುಲಿಗಳಿದ್ದವು. ಆದರೆ ಯಾವುದೇ ಕಾನೂನು ಇಲ್ಲದಿದ್ದರಿಂದ ಬೇಟೆಗಾರರು ಹುಲಿಗಳನ್ನು ಸಾಯಿಸಿದ್ದರಿಂದ ಸಂತತಿ ಕಡಿಮೆಯಾಗಿ ಒಂದು ಸಾವಿರಕ್ಕೆ ಇಳಿದಿತ್ತು ಎಮದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. 1973ರಿಂದ ಹುಲಿ ಸಂರಕ್ಷಣಾ ಅಭಯಾರಣ್ಯ ರಚಿಸಲಾಯಿತು. ನಂತರದ ದಿನಗಳಲ್ಲಿ ಹುಲಿ ಸಂಖ್ಯೆ ಅಧಿಕವಾಯಿತು. ಭೂ ಪ್ರದೇಶದ ಶೇ.33 ಅರಣ್ಯ ಇರಬೇಕಾಗಿತ್ತು. ಆದರೆ ಶೇ.19 ಅರಣ್ಯ ಮಾತ್ರ ಉಳಿದಿದೆ. ವನ್ಯಜೀವಿಗಳಿಗೆ ಓಡಾಡಲು ಜಾಗ ಬೇಕಾಗಿದೆ. ಪ್ರತಿ ಪ್ರಾಣಿಯೂ ಇನ್ನೊಂದು ಪ್ರಾಣಿ ಮೇಲೆ ಅವಲಂಬಿತವಾಗಿರುವುದು ಪ್ರಕೃತಿಯ ವಿಸ್ಮಯ ಎಂದು ಅಭಿಪ್ರಾಯಪಟ್ಟರು.
ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಸಂತೋಷ್ ಸಾಗರ್ ಮಾತನಾಡಿ, ಅರಣ್ಯ-ವನ್ಯಜೀವಿ-ಮನುಷ್ಯರಿಗೂ ಅವಿನಾಭಾವ ಸಂಬಂಧವಿದೆ. ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಹುಲಿ ಸಂಖ್ಯೆ ಕಡಿಮೆಯಾದರೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಆ ಪ್ರಾಣಿಗಳು ಆಹಾರಕ್ಕಾಗಿ ತೋಟ, ಗದ್ದೆಗಳಿಗೆ ನುಗ್ಗುತ್ತವೆ. ಇದರಿಂದ ರೈತರಿಗೆ ಹಾನಿ ಜಾಸ್ತಿಯಾಗುತ್ತದೆ. ಪ್ರಾಣಿಗಳ ಆಹಾರ ಸರಪಳಿಯಲ್ಲಿ ವ್ಯತ್ಯಾಸವಾಗದಂತೆ ಹುಲಿ ಸೇರಿ ಪ್ರತಿ ಪ್ರಾಣಿಗಳನ್ನೂ ಸಂರಕ್ಷಿಸಬೇಕಾಗುತ್ತದೆ. ಹುಲಿ 10ರಿಂದ 12 ವರ್ಷ ಬದುಕುತ್ತದೆ. ಹುಲಿ ಒಂದು ಜಿಂಕೆಯನ್ನು ಕೊಂದರೆ 10ರಿಂದ 15 ದಿನಗಳ ಕಾಲ ಬೇರೆ ಆಹಾರ ಸೇವಿಸುವುದಿಲ್ಲ. ಹುಲಿ ಸಂರಕ್ಷಣೆಗಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಚನೆಯಾಗಿದೆ ಎಂದು ಮಾಹಿತಿ ನೀಡಿದರು.
ಮುರಾರ್ಜಿ ಶಾಲೆ ಪ್ರಾಚಾರ್ಯೆ ಪೂರ್ಣಿಮಾ ಮಾತನಾಡಿ, ದೇಶದಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಹುಲಿಗಳಿವೆ ಎಂದರು. ಹುಲಿ ಜೀವನ ಚಕ್ರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ವಿವರಿಸಲಾಯಿತು. ಪ್ರವೀಣ್‌ಕುಮಾರ್, ಗೌಸ್ ಮೊಯಿಯುದ್ದೀನ್ ಇತರರಿದ್ದರು.