

ಶಿರಸಿ: ದೇಶದ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸಂಖ್ಯೆ ಇಲ್ಲ. ರೋಗಿಗಳ ಸಮಸ್ಯೆಗೆ ತ್ವರಿತ ಪರಿಹಾರ ಆರೋಗ್ಯ ಶಿಬಿರಗಳಿಂದ ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ರಾಘವೇಂದ್ರಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಸ್ತೆ, ಕಟ್ಟಡ, ಸೇತುವೆ ಮತ್ತಿತರ ಸೌಲಭ್ಯ ಕೊಡಿಸಬಹುದು. ಆದರೆ, ಆರೋಗ್ಯ ಸಮಸ್ಯೆ ಬಂದಾಗ ವೈದ್ಯರೇ ಬೇಕು. ಅವರ ಸೇವೆ ಅನನ್ಯ, ಅನುಪಮ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ರೋಟರಿ ಅಧ್ಯಕ್ಷೆ ಡಾ. ಸುಮನ್ ಹೆಗಡೆ, ಐಎಂಎ ಅಧ್ಯಕ್ಷ ಡಾ. ಮಧುಕೇಶ್ವರ ಜಿ.ವಿ, ಸ್ಕೊಡ್ವೇಸ್ ಪ್ರಮುಖರಾದ ವೆಂಕಟೇಶ ನಾಯ್ಕ, ಸರಸ್ವತಿ ಎನ್. ರವಿ, ಶ್ರೀಧರ ಹೆಗಡೆ, ಕೆ.ಎನ್.ಹೊಸ್ಮನಿ ಇತರರು ಇದ್ದರು. ಅನಂತಪದ್ಮನಾಭ ನಿರ್ವಹಿಸಿದರು.
ಸ್ತ್ರೀರೋಗ, ಸಾಮಾನ್ಯ ವೈದ್ಯಕೀಯ, ನೇತ್ರ, ನರರೋಗ, ಹೃದಯರೋಗ ತಪಾಸಣೆ, ಚರ್ಮ, ಉದರ, ಕ್ಯಾನ್ಸರ್, ಮೂತ್ರ ರೋಗ, ಮಧುಮೇಹ, ಮಕ್ಕಳ ತಪಾಸಣೆ ನಡೆದವು. ಶಿರಸಿ ಐಎಂಎ ವೈದ್ಯರು, ಶಿವಮೊಗ್ಗದ ವೈದ್ಯರು ಭಾಗವಹಿಸಿದ್ದರು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಹಾವೇರಿ, ಸೊರಬ ಭಾಗದ ರೋಗಿಗಳು ಇದರ ಪ್ರಯೋಜನ ಪಡೆದರು.