ಪುಸ್ತಕದ ಅಂಗಡಿಗಳಿಗಿಂತ ಮದ್ಯದಂಗಡಿಗಳೇ ಹೆಚ್ಚು

13blrp1
Published on

ಹಾಸನ: ಇತ್ತೀಚೆಗೆ ಪುಸ್ತಕದ ಅಂಗಡಿಗಳಿಗಿಂತ ಮದ್ಯದಂಗಡಿಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಹಿರಿಯ ಸಾಹಿತಿ ಶೈಲಜಾ ಹಾಸನ ಬೇಸರ ವ್ಯಕ್ತಪಡಿಸಿದರು.


ಬೇಲೂರುತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ಸರ್ಕಾರಿ ನೌಕರರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತಿ ಮಧು ಮಾಲತಿ ಅವರ ಸ್ವಾತಿ ಹನಿ, ಪ್ರೀತಿ ಮುತ್ತಾದಂತೆ ಹಾಗೂ ಕು. ಶಶಿ ಅವರ ‘ಬೆಳ್ಳಿ ಬೆಳಕು’ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಬೇಲೂರಿನಲ್ಲಿ ಸಾಕಷ್ಟು ಸಾಹಿತಿಗಳಿದ್ದಾರೆ. ಇವರೊಂದಿಗೆ ಮಧು ಮಾಲತಿ ಮತ್ತು ಶಶಿ ಸಹ ಸೇರಿದ್ದಾರೆ. ವಿದ್ಯೆ ಮನುಷ್ಯನನ್ನು ಮನುಷ್ಯನನ್ನಾಗಿ ನೋಡಲು ಕಲಿಸುತ್ತದೆ. ಇಂದಿನ ಮಕ್ಕಳಿಗೆ ಕಂಪ್ಯೂಟರ್, ಮೊಬೈಲ್ ಅಟ್ಯಾಚ್‌ಮೆಂಟ್ ಹೆಚ್ಚು. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಹಾಗಾಗಿ, ಪಾಲಕರು ಮಕ್ಕಳಿಗೆ ಬಾಲ್ಯದಲ್ಲೇ ಅವರ ವಯಸ್ಸಿಗನುಗುಣವಾಗಿ ಪುಸ್ತಕಗಳನ್ನು ಕೊಡಿಸಿ ಓದಲು ಪ್ರೇರೇಪಿಸಬೇಕು. ಜತೆಗೆ ಪಾಲಕರು ಸಹ ಅವರೊಟ್ಟಿಗೆ ಕುಳಿತು ಓದುವ ಅಭ್ಯಾಸ ಬೆಳೆಸಿಕೊಂಡಾಗ ಮಕ್ಕಳ ಉತ್ತಮ ಭವಿಷ್ಯ ರೂಪಿಸಬಹುದು ಎಂದರು.


ಮೈಸೂರು ಮುಕ್ತ ವಿಶ್ವ ವಿದ್ಯಾಲಯದ ಸಂಯೋಜನಾಧಿಕಾರಿ ಹಾಗೂ ಸಾಹಿತಿ ಅವರೇಕಾಡು ವಿಜಯಕುಮಾರ್ ಮಾತನಾಡಿ, ವಾಸ್ತವ ಜಗತ್ತಿನಲ್ಲಿ ಓದುವ ಭಾಗ ಒಂದಾದರೆ, ಬರೆಯುವ ಭಾಗವು ಒಂದಾಗಿದೆ. ಬರವಣಿಗೆ ಎಂಬುದು ಸುಲಭದ ಮಾತಲ್ಲ. ಕಾವ್ಯಕ್ಕೆ ತನ್ನದೇ ಆದ ಶಕ್ತಿ ಮತ್ತು ಸ್ವಂತಿಕೆ ಇದೆ. ಭಾಷೆಗೆ ಹತ್ತಿರ ಎಂದರೆ ಅದು ಕಾವ್ಯ. ಸಾಮಾಜಿಕ ಸ್ಥಿತಿಗತಿಗಳ ವಿವರ ಕಾವ್ಯದಲ್ಲಿರುತ್ತದೆ. ಸಾಮಾನ್ಯ ಜನರ ಆಶೋತ್ತರಗಳನ್ನು ಚಿತ್ರಿಸುವ ಕಾವ್ಯವನ್ನು ಮದುಮಲಾತಿ ಮತ್ತು ಶಶಿ ಅವರು ಬರೆದಿದ್ದಾರೆ ಎಂದರು.


ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕೋಶಾಧ್ಯಕ್ಷ ಮಂಜೇಗೌಡ, ಸಾಹಿತಿ ಡಾ.ಶ್ರೀವತ್ಸ, ಗೆಂಡೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಗಣೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಶಿವಮೂರ್ತಿ, ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜು, ಆರ್.ಎಸ್.ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net