

ಜಗದೀಶ್ ಟಿ.ಎನ್. ಚನ್ನಗಿರಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಚನ್ನಗಿರಿ ತಾಲೂಕಿನ 12 ಸರ್ಕಾರಿ ಶಾಲೆಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಿವೆ.
ಪರೀಕ್ಷೆಗೆ ಕುಳಿತ 3661 ವಿದ್ಯಾರ್ಥಿಗಳಲ್ಲಿ 3377 ಮಕ್ಕಳು ಪಾಸಾಗಿದ್ದಾರೆ. ಶೇ. 92.24ರಷ್ಟು ಫಲಿತಾಂಶ ಪಡೆದು (ಜಿಲ್ಲೆಗೆ) ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. 2023-24ನೇ ಸಾಲಿನಲ್ಲಿ ಫಲಿತಾಂಶ ಹೆಚ್ಚಿಸಿಕೊಳ್ಳುವ ಸವಾಲು ಶಿಕ್ಷಣ ಇಲಾಖೆ ಮುಂದಿದೆ.
ಶಾಲಾ ಪ್ರಾರಂಭದ ದಿನದಿಂದ ವಿಷಯವಾರು ಶಿಕ್ಷಕರ ಮೂಲಕ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿ, ನಿಗದಿತ ಸಮಯದಲ್ಲಿ ಪಠ್ಯ ಪೂರ್ಣಗೊಳಿಸಿದ ಬಳಿಕ ಪುನರ್‌ಮನನ ಮಾಡಿಸಿದ್ದು ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ನಂಬಲಾಗಿದೆ.
ಪಾಕ್ಷಿಕ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಳೆದ ಶಿಕ್ಷಕ ವೃಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಂದಲೇ ಉತ್ತರ ಹೇಳಿಸಿದ್ದು ಕೂಡ ಸುಧಾರಣೆಗೆ ದಾರಿ ಮಾಡಿಕೊಟ್ಟಿತು.
ಹತ್ತು ಜನರ ಗುಂಪು ಕಲಿಕೆ, ಹಿಂದುಳಿದ ಮಕ್ಕಳನ್ನು ಉತ್ತಮ ವಿದ್ಯಾರ್ಥಿಗಳ ಜತೆ ಜೋಡಣೆ, ಶಿಕ್ಷಕರ ಜತೆ ವಿಷಯವಾರು ಚರ್ಚೆಗೆ ಅವಕಾಶ, ಪ್ರತಿ ತಿಂಗಳು ತಾಯಂದಿರ ಸಭೆ, ಹೆಚ್ಚು ಅಂಕ ಪಡೆಯಲು ಪ್ರೋತ್ಸಾಹ, 10 ವರ್ಷ ಅವಧಿಯ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಮೂರು ಬಾರಿ ಬಿಡಿಸುವಿಕೆ, ಬೆಳಗ್ಗೆ- ಸಂಜೆ ಹೆಚ್ಚುವರಿ 1 ಗಂಟೆ ಬೋಧನೆ ಅಳವಡಿಕೆ ಮಾಡಿಕೊಂಡಿದ್ದೇ ಬಹುತೇಕ ಶಾಲೆಗಳು ಶೇ. 100 ಫಲಿತಾಂಶ ಪಡೆಯಲು ಕಾರಣವಾಯಿತು.
ಶೇಕಡಾ ನೂರು ಫಲಿತಾಂಶ ಪಡೆದ ಶಾಲೆಗಳು
ಸರ್ಕಾರಿ ಉರ್ದು ಪ್ರೌಢಶಾಲೆ ಹೊಸೂರು, ಕಾಕನೂರಿನ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ, ಚಿಕ್ಕಮಾಡಾಳ್ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ, ಮಾವಿನಹೊಳೆಯ ಇಂದಿರಾಗಾಂಧಿ ವಸತಿ ಶಾಲೆ, ಕಾರಿಗನೂರಿನ ಮುರಾರ್ಜಿ ವಸತಿ ಪ್ರೌಢಶಾಲೆ, ಕೆರೆಬಿಳಚಿಯ ಮುರಾರ್ಜಿ ವಸತಿ ಪ್ರೌಢಶಾಲೆ, ತ್ಯಾವಣಗಿಯ ಅಂಬೇಡ್ಕರ್ ವಸತಿ ಶಾಲೆ, ಕಂಚುಗಾರನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಕಣಿವೆಬಿಳಚಿಯ ಸರ್ಕಾರಿ ಪ್ರೌಢಶಾಲೆ, ಬಸವಾಪಟ್ಟಣದ ಸರ್ಕಾರಿ ಕ್ಯಾಂಪ್ ಪ್ರೌಢಶಾಲೆ, ಯಲೋದಳ್ಳಿಯ ಸರ್ಕಾರಿ ಪ್ರೌಢಶಾಲೆ, ಚನ್ನಗಿರಿಯ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ.