ಚಾಮರಾಜ ವಿಧಾನಸಭಾ ಕ್ಷೇತ್ರದ ಜನಸ್ಪಂದನದಲ್ಲಿ ಸಮಸ್ಯೆಗಳ ಮಹಾಪೂರ

dc10dd31-c1a2-4d53-b1ad-d8f059e8ca51
Published on

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಿದ ಪ್ರಥಮ ಜನಸ್ಪಂದನ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಮಹಾಪೂರವೇ ಹರಿದು ಬಂದಿತು.
ನಜರ್‌ಬಾದ್‌ನ ಶ್ರೀನಿಂಬುಜಾಂಬದೇವಿ ದೇವಾಲಯದ ಸಭಾ ಭವನದಲ್ಲಿ 40ನೇ ವಾರ್ಡಿನ ಜನತೆಗಾಗಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ನೂರಾರು ಜನರು ಅರ್ಜಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಸಿಎಂ ಹಾಗೂ ಡಿಸಿಎಂ ಅವರ ಸೂಚನೆ ಮೇರೆಗೆ ವಾರ್ಡ್ ಹಂತದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿಯೋಜನೆಯ ಹಣ ಬರುತ್ತಿಲ್ಲ, ವಿವಿಧ ಯೋಜನೆಗಳ ಹಣ ಸ್ಥಗಿತಗೊಂಡಿದೆ. ಪೊಲೀಸರೇ ಭೂ ವಿಚಾರದಲ್ಲಿ ತೊಂದರೆ ಕೊಡುತ್ತಿದ್ದಾರೆ ಇತ್ಯಾದಿ ದೂರುಗಳು ಕೇಳಿಬಂದವು.
ನಜರ್‌ಬಾದ್‌ನ ಶಾರದಮ್ಮ ಅವರು, ಪಕ್ಕದ ಮನೆಯ ಪೊಲೀಸರು ಜಾಗದ ವಿಚಾರವಾಗಿ ಸುಮ್ಮನೆ ಜಗಳ ಮಾಡುತ್ತಿದ್ದಾರೆ, ಈ ಬಗ್ಗೆ ಪರಿಶೀಲಿಸುವಂತೆ ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಶಾಸಕರು, ಶೀಘ್ರ ನಗರಪಾಲಿಕೆ ಅಧಿಕಾರಿಗಳ ಕಳುಹಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಹೇಳಿದರು.
ಧ್ರುವಕುಮಾರ್, ರಾಜೇಶ್ವರಿ ಅವರು, ಕಳೆದ 20 ವರ್ಷದಿಂದ ರಾಜೀವ್‌ಗಾಂಧಿ ಆವಾಸ್ ಯೋಜನೆಯಡಿ ಮನೆಗೆ ಅರ್ಜಿ ಹಾಕಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ, ಇರಲು ಮನೆ ಇಲ್ಲದಂತಾಗಿದೆ ಎಂದಾಗ ಶಾಸಕರು ಮನೆ ಕೊಡಿಸುವ ಭರವಸೆ ನೀಡಿದರು.
ಚಿಕ್ಕಮ್ಮ ಹಾಗೂ ಕುರುಬಗೇರಿಯ ತಾಯಮ್ಮ ಅವರು, ಹಲವು ತಿಂಗಳಿಂದ ವೃದ್ಧಾಪ್ಯ ವೇತನ ಬರುತ್ತಿಲ್ಲವೆಂದು ಅವಲತ್ತುಕೊಂಡರು. ಆರ್.ಮೋಹನ್ ಅವರು ಹೃದಯಾಘಾತವಾಗಿ ಔಷಧಕ್ಕೂ ಹಣ ಇಲ್ಲದ ಸ್ಥಿತಿ ಆಗಿದೆ. ಪಿಂಚಣಿ ಸೌಲಭ್ಯವನ್ನಾದರೂ ಕೊಡಿ ಎಂದು ಬೇಡಿಕೆ ಮುಂದಿಟ್ಟರು.
ರಾಣಿ ಅವರು, ಮನೆಗೆ ಸೆಸ್ಕ್‌ನವರು ವಾಣಿಜ್ಯ ಬಳಕೆ ಎಂದು ಬಿಲ್ ಕೊಡುತ್ತಿದ್ದು, ದುಬಾರಿ ಬಿಲ್ ಕಟ್ಟುವಂತಾಗಿದೆ. ಆದ್ದರಿಂದ ಗೃಹಬಳಕೆ ಎಂದು ಪರಿಗಣಿಸಿ ಸಂಪರ್ಕವನ್ನು ಗೃಹಜ್ಯೋತಿಗೆ ಪರಿವರ್ತಿಸುವಂತೆ ಕೋರಿದರು.
ನಜರ್‌ಬಾದ್‌ನ ಕುಮಾರಿ ಅವರು, ಮನೆಗೆ ಎಳೆದಿರುವ ವಿದ್ಯುತ್ ಸಂಪರ್ಕ ಶಾರ್ಕ್ ಸರ್ಕ್ಯೂಟ್ ಆಗುತ್ತಿದ್ದು, ಪರಿಶೀಲಿಸುವಂತೆ ಸೆಸ್ಕ್ ಸಿಬ್ಬಂದಿ ಕೋರಿದರೆ ಅದಕ್ಕೂ ಹಣ ಕೇಳುತ್ತಿದ್ದಾರೆ ಎಂದು ಅಳಲು ಹೇಳಿಕೊಂಡರು. ಅಕ್ಕಿ ದುಡ್ಡು ಬರ್ತಿಲ್ಲ. ನಜರ್‌ಬಾದ್ ಉದ್ಯಾನವನದಲ್ಲಿ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು ಸರಿಪಡಿಸುವಂತೆ ದೂರುಗಳು ಕೇಳಿ ಬಂದವು.
100ಕ್ಕೂ ಹೆಚ್ಚು ಜನರು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ್ದರೂ ಹಣ ಬರುತ್ತಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮ ವಹಿಸಿ ಹಣ ಬರುವಂತೆ ಮಾಡಬೇಕು ಎಂದು ಕೋರಿದರು.
ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ, ಕೆಲವು ತಾಂತ್ರಿಕ ಕಾರಣದಿಂದ ಗೃಹಲಕ್ಷ್ಮಿಯೋಜನೆ ನನ್ನ ಕ್ಷೇತ್ರದಲ್ಲೇ 3 ಸಾವಿರಕ್ಕೂ ಹೆಚ್ಚು ಜನರಿಗೆ ತಲುಪಿಲ್ಲ. ಅದನ್ನು ಸರಿಪಡಿಸುವಂತೆ ಹೇಳಿದ್ದು, ಉಳಿದ ಸಮಸ್ಯೆಗಳ ಇತ್ಯರ್ಥಕ್ಕೆ ವಾರ್ಡ್‌ವಾರು ಸಭೆ ನಡೆಸುತ್ತಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹಿಂದು ವಿರೋಧಿಗಳಾಗಿ ಬಿಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಆದರೆ ನಾವು ಜಾತ್ಯತೀತ ಹಿಂದುಗಳಾಗಿ ಎಲ್ಲ ಸಮುದಾಯವನ್ನು ಜತೆಗೆ ಕರೆದೊಯ್ಯುವ ಏಕತೆ ದೇಶವಾಗಿ ಕಾಂಗ್ರೆಸ್ ಮಾಡಿದೆ ಎಂದರು.

ಸಭೆಯಲ್ಲಿ ಅವ್ಯವಸ್ಥೆ
ಶಾಸಕರು ನಡೆಸಿದ ಮೊದಲ ಜನಸ್ಪಂದನ ಕಾರ್ಯಕ್ರಮವೇ ಅವ್ಯವಸ್ಥೆಯಿಂದ ಕೂಡಿತ್ತು. ಜನಸ್ಪಂದನಾ ಕಾರ್ಯಕ್ರಮ 10.30ಕ್ಕೆ ನಿಗದಿಯಾಗಿದ್ದರೂ ಶಾಸಕರು ಆಗಮಿಸುವ ವೇಳೆಗೆ ಸಮಯ 11.45 ಅಗಿತ್ತು.
ಒಂದು ತಾಸಿಗೂ ಹೆಚ್ಚು ಕಾಲ ವಿಳಂಬವಾಗಿ ಬಂದರು. ಹೀಗಾಗಿ ಅರ್ಜಿ ಹಿಡಿದು ಆಗಮಿಸಿದ್ದ ನೂರಾರು ಮಹಿಳೆಯರು, ಹಿರಿಯರು ಬಸವಳಿದರು. ಪೂರ್ವ ಸಿದ್ಧತೆ ಇಲ್ಲದೆ ಇದ್ದುದ್ದರಿಂದ ತಮ್ಮ ಅರ್ಜಿ ಕೊಡಲು ಜನರು ಮುಗಿಬಿದ್ದರು. ವಿಶೇಷ ಚೇತನರು ಸೇರಿ ಅನೇಕ ಹಿರಿಯರು ತಮ್ಮ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಹಿಡಿದು ಆಗಮಿಸಿದ್ದ ದೃಶ್ಯ ಕಂಡು ಬಂದವು. ನಗರಪಾಲಿಕೆ ಆಯುಕ್ತ ಮಹಮ್ಮದ್ ಷರೀಫ್ ಸೇರಿ ಅನೇಕ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net