ಬಿಜೆಪಿ ಅಧ್ಯಕ್ಷರಿಗೆ ಹಲವು ಸವಾಲು

RAVI KALAPPA - Copy
Published on

ಮಡಿಕೇರಿ: ಭಾರಿ ಪೈಪೋಟಿ ಮಧ್ಯೆ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದ ನಾಪಂಡ ರವಿ ಕಾಳಪ್ಪ ನೇಮಕ ಮಾಡಲಾಗಿದೆ.


ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಕೊಡಗು ಬಿಜೆಪಿಯಲ್ಲೂ ಸಣ್ಣ ಮಟ್ಟದಲ್ಲಿ ಸಂಚಲನ ಶುರುವಾಗಿತ್ತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ವಿವಿಧ ಮಾನದಂಡಗಳ ಆಧಾರದಲ್ಲಿ ಹಲವರು ದೊಡ್ಡ ಪ್ರಯತ್ನ ನಡೆಸಿದ್ದರು. ಇವೆಲ್ಲದರ ಮಧ್ಯೆ ಇದೀಗ ನಾಪಂಡ ರವಿ ಕಾಳಪ್ಪ ವಿಜಯೇಂದ್ರ ಟೀಂ ಸೇರಿಕೊಂಡಿದ್ದಾರೆ.


ಕೊಡಗಿನಲ್ಲಿ ಬಿಜೆಪಿ ಸಂಘಟನೆ ಆಧಾರದಲ್ಲಿ ನಿಂತಿದೆ. ಸಂಘ ಪರಿವಾರದ ಭದ್ರ ಅಡಿಪಾಯದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಚರಿಸುತ್ತಿದೆ. ಪಕ್ಷದ ವರಿಷ್ಠರಿಂದ ಬಂದಿರುವ ಆದೇಶಗಳು ಇಲ್ಲಿ ಚಾಚೂ ತಪ್ಪದೇ ಪಾಲನೆ ಆಗುತ್ತದೆ. ಆದರೂ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ನಾಪಂಡ ರವಿ ಕಾಳಪ್ಪ ಮುಂದೆ ಈಗ ಹಲವು ಸವಾಲುಗಳಿವೆ. ಗ್ರಾಮ ಪಂಚಾಯಿತಿಯಿಂದ ಲೋಕಸಭೆ ತನಕ ತಾವೇ ಅಧಿಕಾರದಲ್ಲಿ ಇದ್ದೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟಿರುವ ಪೆಟ್ಟು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಕಾರ್ಯಕರ್ತರನ್ನು ಮೊದಲು ಈ ಆಘಾತದಿಂದ ಮೇಲೆತ್ತಬೇಕಿದೆ.


ಕೊಡವ ಸಮುದಾಯಕ್ಕೆ ಸೇರಿದ ಪಳೆಯಂಡ ರಾಬಿನ್ ದೇವಯ್ಯ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಆಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯ ಮತ್ತೊಂದು ಪ್ರಬಲ ಸಮುದಾಯವಾದ ಗೌಡ ಸಮುದಾಯಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಅವಕಾಶ ಕೊಡಬೇಕು ಎನ್ನುವ ಕೂಗು ಪಕ್ಷದೊಳಗೇ ಕೇಳಿಬರುತ್ತಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲೂ ಹೆಚ್ಚು ಮಂದಿ ಗೌಡ ಸಮುದಾಯದವರೇ ಕಂಡುಬಂದಿದ್ದರು. ಹಾಗಾಗಿ ಜಿಲ್ಲಾಧ್ಯಕ್ಷ ಸ್ಥಾನ ವಂಚಿತ ಸ್ವಪಕ್ಷೀಯರನ್ನು ಸಮಾಧಾನ ಪಡಿಸುವುದರ ಜತೆಗೆ ಗೌಡ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ನೂತನ ಅಧ್ಯಕ್ಷರ ಮೇಲಿದೆ.


ಈ ಮಧ್ಯೆ ಲೋಕಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿದ್ದು, ಸಿಗುವ ಅಲ್ಪ ಕಾಲಾವಧಿಯಲ್ಲಿ ಪಕ್ಷವನ್ನು ಪುನರ್‌ಸಂಘಟಿಸುವ ಕೆಲಸ ಮಾಡಬೇಕಿದೆ. ಸುಮಾರು ಮೂರು ದಶಕಗಳ ಕಾಲ ಬಿಜೆಪಿ ಹಿಡಿತದಲ್ಲಿ ಇದ್ದ ಕೊಡಗು ಕಳೆದ ವಿಧಾನಸಭಾ ಚನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಜಿಲ್ಲೆಯ ಎರಡೂ ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಕಾಂಗ್ರೆಸ್ ಶಕೆ ಆರಂಭವಾಗಿದೆ. ಇವುಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಶತಾಯ ಗತಾಯ ಗೆಲ್ಲುವುದಕ್ಕೆ ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಇವುಗಳನ್ನು ಎದುರಿಸಿ ಕ್ಷೇತ್ರ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ನಾಪಂಡ ರವಿ ಕಾಳಪ್ಪ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಜಿಲ್ಲೆಯ ಜನತೆಯಲ್ಲಿದೆ.


ಮಡಿಕೇರಿ ಸಮೀಪದ ಮಕ್ಕಂದೂರಿನವರಾದ ರವಿ ಕಾಳಪ್ಪ ಬಿಎಸ್‌ಸಿ ಪದವೀಧರರು. ಕಾಲೇಜು ದಿನಗಳಲ್ಲೇ ಎಬಿವಿಪಿ ಮೂಲಕ ಬಿಜೆಪಿ ನಂಟು ಬೆಳೆಸಿಕೊಂಡಿದ್ದರು. ಎಬಿವಿಪಿ ಜಿಲ್ಲಾ ಪ್ರಮುಖರಾಗಿ ಕೆಲಸ ಮಾಡಿದ್ದ ಇವರು ೨ ಬಾರಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ೧ ಬಾರಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದರು. ಮಡಿಕೇರಿ ತಾಲೂಕು ಮಂಡಲದ ಕಾರ್ಯದರ್ಶಿಯಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ರವಿ ಕಾಳಪ್ಪ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಒಟ್ಟು ೫ ಬಾರಿ ಸೇವೆ ಸಲ್ಲಿಸಿದ್ದಾರೆ.

ಮಕ್ಕಂದೂರು ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ೨ ಬಾರಿ ಆಯ್ಕೆ ಆಗಿದ್ದ ಇವರು, ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಮಡಿಕೇರಿ ತಾಲೂಕು ಅಕ್ರಮ, ಸಕ್ರಮ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ರಾಜ್ಯಾಧ್ಯಕ್ಷರಾಗಿ ರವಿ ಕಾಳಪ್ಪ ಕಾರ್ಯನಿರ್ವಹಿಸಿದ್ದರು. ಹೀಗೆ ಪಕ್ಷ ಸಂಘಟನೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಅನುಭವ ಹೊಂದಿರುವ ರವಿ ಕಾಳಪ್ಪ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಪಕ್ಷವನ್ನು ಹೇಗೆ ಮುನ್ನಡೆಸಬಹುದು ಎನ್ನುವುದನ್ನು ಕಾತುರದಿಂದ ಕಾಯುತ್ತಿದ್ದಾರೆ.

ಪಕ್ಷ ಸಂಘಟನೆಗೆ ಮೊದಲ ಆದ್ಯತೆ ಕೊಡಲಾಗುತ್ತದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಗುರಿ ನಮ್ಮ ಮುಂದೆ ಇದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ನಮಗೆ ದೊಡ್ಡ ಸೋಲು ಏನೂ ಆಗಲಿಲ್ಲ. ಹಾಗಾಗಿ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿ ಈ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುವ ಮೂಲಕ ಕಾರ್ಯಕರ್ತರು ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ. ಹಿರಿಯ ಮತ್ತು ಕಿರಿಯರೆನ್ನದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು. ನಮ್ಮ ಶಾಸಕರಿದ್ದಾಗ ನಡೆಯುತ್ತಿದ್ದ ಅಭಿವೃದ್ಧಿ ಕೆಲಸಗಳು ಈಗ ಅಷ್ಟಾಗಿ ನಡೆಯುತ್ತಿರುವಂತೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು.
ನಾಪಂಡ ರವಿಕಾಳಪ್ಪ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net