

ಮಡಿಕೇರಿ: ಒಂದು ಛಾಯಾಚಿತ್ರ ನೂರಾರು ವಿಷಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ ಎಂದು ಯುವ ರಾಜಕಾರಣಿ ಡಾ.ಮಂತರ್ ಗೌಡ ಹೇಳಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಗೆ ಕ್ಯಾಮೆರಾ ಕ್ಲಿಕ್ಕಿಸುವ ಮೂಲಕ ವಿಶ್ವ ಚಾಲನೆ ನೀಡಿ ಮಾತನಾಡಿದರು.
ಕ್ಯಾಮರಾ ಕಣ್ಣಲ್ಲಿ ನೋಡಿ, ವಿಷಯವನ್ನು ಗ್ರಹಿಸಿ ಫೋಟೋ ಕ್ಲಿಕ್ಕಿಸಬೇಕು. ಒಂದು ಛಾಯಾಚಿತ್ರ ನೂರಾರು ವಿಷಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ನೋಡುವ ನೋಟಕ್ಕೆ ಅದು ಅರ್ಥೈಸದಿದ್ದಲ್ಲಿ ಪ್ರಯೋಜನವಾಗಲಾರದೆಂದು ಛಾಯಾಗ್ರಹಣದ ಸೂಕ್ಷ್ಮವನ್ನು ಅವರು ತೆರೆದಿಟ್ಟರು.
ಸಾಕಷ್ಟು ಛಾಯಾಚಿತ್ರಗಳು ಪರಿಸರ, ವನ್ಯಜೀವಿಗಳನ್ನು ಕೇಂದ್ರೀಕರಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆೆಯತ್ತ ಪ್ರತಿಯೊಬ್ಬರು ಆಸಕ್ತರಾಗಬೇಕು ಮತ್ತು ಅವುಗಳ ರಕ್ಷಣೆೆ ಅವಶ್ಯವಾಗಿ ಆಗಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಛಾಯಾಗ್ರಹಣ ಅತ್ಯಂತ ದುಬಾರಿ ಹವ್ಯಾಸವಾಗಿದೆ. ಹಿಂದೆ ಒಂದು ಫೋಟೋ ತೆಗೆದು ಅದು ಕೈಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತಿತ್ತು. ಆದರೆ, ಬದಲಾದ ತಾಂತ್ರಿಕತೆ ಡಿಜಿಟಲ್ ಪೋಟೋಗ್ರಫಿಯಿಂದ ಕ್ಷಣ ಮಾತ್ರದಲ್ಲಿ ಎಲ್ಲರಿಗೂ ದೊರಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳ್ಳುವಂತಾಗಬೇಕು. ಪತಿಕೋದ್ಯಮ ವಿದ್ಯಾರ್ಥಿಗಳು ವರದಿಗಾರಿಕೆಯ ತಮ್ಮ ಕಲಿಕೆಯ ಅವಧಿಯಲ್ಲಿ ಛಾಯಾಗ್ರಹಣಕ್ಕೂ ಹೆಚ್ಚಿನ ಮಹತ್ವನ್ನು ನೀಡುವಂತಾಗಬೇಕೆಂದು ಹೇಳಿದರು.
ಹಿರಿಯ ವರದಿಗಾರ, ಛಾಯಾಗ್ರಾಹಕ ಎಚ್.ಟಿ.ಅನಿಲ್ ಮಾತನಾಡಿ, ಛಾಯಾಗ್ರಾಹಕರನ್ನು ಗುರುತಿಸಿ, ಪ್ರೋತ್ಸಾಹಿಸುವ ದಿನವೇ ’ವಿಶ್ವ ಛಾಯಾಗ್ರಹಣ ದಿನ’. ಪ್ರಾಕೃತಿಕ ವಿಕೋಪವಿರಬಹುದು, ನೋವು ನಲಿವಿನ ಕ್ಷಣಗಳಿರಬಹುದು. ಈ ಯಾವುದೇ ವಿಚಾರ ಸುದ್ದಿಯಾಗಿ ಗಮನ ಸೆಳೆಯಬೇಕಾದರೆ ಪೂರಕವಾದ ಫೋಟೋ ಅತ್ಯವಶ್ಯವೆಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮುರಳೀಧರ್ ಮಾತನಾಡಿ, ಎಲ್ಲಾ ಪತ್ರಕರ್ತರು ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಛಾಯಾಗ್ರಹಣದೆಡೆಗಿನ ಆಸಕ್ತಿ, ವಿಷಯದ ಆಳವಾದ ಅರಿವು ಇರುವವರು ಉತ್ತಮ ಛಾಯಾಗ್ರಾಹಕರಾಗುತ್ತಾರೆ. ಸಾಕಷ್ಟು ಸಂಕಷ್ಟದ ಅವಧಿಗಳಲ್ಲಿ ಛಾಯಾಗ್ರಾಹಕರು ಜೀವದ ಹಂಗು ತೊರೆದು ಅತ್ಯುತ್ತಮವಾದ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಅಂತಹವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಹೆಮ್ಮೆಯಾಗಿದೆಯೆಂದು ನುಡಿದರು.
ಐವರು ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ: ಸಮಾರಂಭದಲ್ಲಿ ಹಿರಿಯ ಛಾಯಾಗ್ರಾಹಕರಾದ ಪೊನ್ನಂಪೇಟೆಯ ಎಸ್.ಎಲ್. ಶಿವಣ್ಣ, ಪೊನ್ನಂಪೇಟೆಯ ಐನಂಡ ಬೋಪಣ್ಣ, ಮೂರ್ನಾಡಿನ ಟಿ.ಸಿ. ನಾಗರಾಜ್, ಸುಂಟಿಕೊಪ್ಪದ ಎಂ.ಬಿ. ವಿನ್ಸೆಂಟ್, ಮಡಿಕೇರಿಯ ಹೆೆಚ್.ಎನ್. ಲಕ್ಷ್ಮೀಶ್ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಿ.ಜಿ. ಅನಂತ ಶಯನ, ಸಂಘದ ಪದಾಧಿಕಾಾರಿಗಳಾದ ಸುರೇಶ್ ಬಿಳಿಗೇರಿ, ಟಿ.ಕೆ.ಸಂತೊಷ್, ಉಷಾ ಪ್ರೀತಂ, ಉಜ್ವಲ್ ರಂಜಿತ್, ಕವನ್ ಕಾರ್ಯಪ್ಪ, ವಿವೇಕ್ ಇತರರಿದ್ದರು.
ಸ್ಪರ್ಧಾ ವಿಜೇತರು: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಪತ್ರಕರ್ತ ಕವನ್ ಕಾರ್ಯಪ್ಪ ಪ್ರಥಮ, ಮಡಿಕೇರಿಯ ಅಶೋಕ್ ದ್ವಿತೀಯ, ಚೆಯ್ಯಂಡಾಣೆಯ ಅಶ್ರಫ್ ತೃತೀಯ, ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಮಡಿಕೇರಿಯ ಲತೀಶ್ ಪೂಜಾರಿ(ಪ್ರ), ಸಿದ್ದಾಪುರದ ಗುರುದರ್ಶನ್(ದ್ವಿ), ಅಶ್ರಫ್(ತೃ) ಬಹುಮಾನ ಪಡೆದರು. ಪದವಿ ಕಾಲೇಜುಗಳ ವಿಭಾಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಹಬೀಜ್ ರುಮಾನ್(ಪ್ರ), ಕುಶಾಲನಗರದ ಎಂಜಿಎಂ ಪದವಿ ಕಾಲೇಜಿನ ಗಗನ್(ದ್ವಿ), ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ತರುಣ್(ತೃ) ಹಾಗೂ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಬಿಟಿಸಿಜಿ ಕಾಲೇಜಿನ ಆಸ್ಪದ್(ಪ್ರ), ಕುಶಾಲನಗರ ಎಂಜಿಎಂ ಕಾಲೇಜಿನ ಗಗನ್(ದ್ವಿ) ಹಾಗೂ ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಮಹೇಂದ್ರ(ತೃ) ಬಹುಮಾನ ಪಡೆದರು.