

ಶಿರಾ: ತಾಲೂಕಿನಲ್ಲಿ ಎಷ್ಟು ನಕಲಿ ವೈದ್ಯರಿದ್ದಾರೆ. ನೀವು ಖರೀದಿಸುವ ಔಷಧ ಕಡಿಮೆ ಗುಣಮಟ್ಟದ್ದಾಗಿದೆ. ನಾನು ಅದನ್ನು ತನಿಖೆ ಮಾಡಿಸುವೆ. ನೀವುಗಳು ಬರೆದುಕೊಡುವ ಔಷಧ ಆಸ್ಪತ್ರೆ ಮುಂಭಾಗದ ಔಷಧ ಅಂಗಡಿಗಳಲ್ಲಿ ಮಾತ್ರ ದೊರಕುತ್ತದೆ ಏಕೆ? ಎಂದು ಶಾಸಕ ಟಿ.ಬಿ.ಜಯಚಂದ್ರ
ತಾಲೂಕು ವೈದ್ಯಾಧಿಕಾರಿಗೆ ಪ್ರಶ್ನಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ 2024 25ನೇ ಸಾಲಿನ ಮಾರ್ಚ್ ಅಂತ್ಯದ ತೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ನಕಲಿ ಔಷಧಗಳನ್ನು ರೋಗಿಗಳಿಗೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನಮ್ಮ ಶಿರಾದಲ್ಲಿ ಎಷ್ಟು ಖಾಸಗಿ ಆಸ್ಪತ್ರೆಗಳಿವೆ?, ಅವುಗಳ ಮೇಲೆ ನಿಗಾ ಇಡುವ ಅಧಿಕಾರ ನಿಮಗಿಲ್ಲವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಸಿದ್ದೇಶ್, ತಾಲೂಕಿನಲ್ಲಿ ಒಟ್ಟು 30ರಿಂದ 35 ನಕಲಿ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಭೇಟಿಕೊಟ್ಟು ಗುಣಮಟ್ಟ ಪರೀಕ್ಷಿಸಿ ನೋಟಿಸ್ ಕೊಡುವ ಅಧಿಕಾರ ಮಾತ್ರ ನಮಗಿದೆ. ಶಿರಾದಲ್ಲಿ ಎಷ್ಟು ಖಾಸಗಿ ಆಸ್ಪತ್ರೆ ಇದೆ ಎಂಬ ಮಾಹಿತಿ ಇಲ್ಲ ಎಂದು ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ, ತಾಲೂಕಿನಲ್ಲಿ ಒಬ್ಬರೂ ನಕಲಿ ವೈದ್ಯರಿರಬಾರದು. ಅಂತಹದರಲ್ಲಿ 30ರಿಂದ 35 ಜನ ಇದ್ದಾರೆ ಎಂದು ಹೇಳುತ್ತಿದ್ದೀರಲ್ಲ ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಮರು ಪ್ರಶ್ನಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವೆ ಎಂದು ವೈದ್ಯರು ಉತ್ತರಿಸಿದರು.
ಪಕ್ಕದ ಹಿರಿಯೂರು ತಾಲೂಕಿನಲ್ಲಿ 12 ಪಂಚಾಯಿತಿಗಳ ರೈತರಿಗೆ ವಿಮಾ ಸೌಲಭ್ಯ ದೊರಕಿದೆ. ಆದರೆ ಶಿರಾ ತಾಲೂಕಿನ ಒಂದು ಪಂಚಾಯಿತಿಗೂ ಕೂಡ ರೈತರಿಗೆ ವಿಮಾ ದೊರಕಿಲ್ಲ ಏಕೆ ಎಂದು ಕೃಷಿ ಅಧಿಕಾರಿ ನಾಗರಾಜ್ಗೆ ಶಾಸಕರು ಪ್ರಶ್ನಿಸಿದರು. ಬೆಳೆ ವಿಮೆಯ ಹಣವನ್ನು ಬೆಳೆಯ ಇಳುವರಿಯ ಮೇಲೆ ನಿರ್ಧರಿಸಲಾಗುತ್ತಿದೆ. ಹಿರಿಯೂರಿನಲ್ಲಿ ಇಳುವರಿ ಕಡಿಮೆ ಇರುವ 12 ಪಂಚಾಯಿತಿಗಳ ರೈತರಿಗೆ ವಿಮೆ ಹಣ ಸಿಕ್ಕಿದೆ. ಆದರೆ ನಮ್ಮ ತಾಲೂಕಿನ ಒಂದು ಪಂಚಾಯಿತಿಯಲ್ಲೂ ಕೂಡ ಕಡಿಮೆ ಇಳುವರಿಯಾಗಿಲ್ಲ. ಆದರಿಂದ ನಮ್ಮ ತಾಲೂಕಿನ ರೈತರಿಗೆ ವಿಮೆ ದೊರಕಿಲ್ಲ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಇದುವರೆಗೂ ಸರ್ಕಾರದಿಂದ ಕಾರ್ಮಿಕರಿಗೆ ಯಾವ ಯಾವ ಯೋಜನೆಗಳು ಬಂದಿವೆ. ಅದರಿಂದ ಎಷ್ಟು ಕಾರ್ಮಿಕರು ಪ್ರಯೋಜನ ಪಡೆದಿದ್ದಾರೆ, ಯಾವ ಯೋಜನೆ ಇನ್ನೂ ಕಾರ್ಮಿಕರಿಗೆ ತಲುಪಿಲ್ಲ ಎಂದು ಕೇಳಿದಾಗ ಮಾಹಿತಿ ನೀಡಿದ ಅಧಿಕಾರಿ ಮೇಲೆ ಗರಂ ಆದ ಶಾಸಕರು ಇನ್ನು
ಹತ್ತು ದಿನ ಒಳಗಾಗಿ ನನಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಎಚ್ಚರಿಸಿದರು.
ಡಿವೈಎಸ್ಪಿ ಶೇಖರ್, ಕೆಡಿಪಿ ಸದಸ್ಯರಾದ ಜಿಎನ್ ಮೂರ್ತಿ, ಜಿಎಸ್ ರವಿ, ಪ್ರಧಾನ ನಾಗರಾಜ್, ತಾಲೂಕು ಯೋಜನಾಧಿಕಾರಿ ರಂಗನಾಥ್ ಇದ್ದರು.
ನೀಮ್ ಆಯಿಲ್ ಸಿಂಪಡಣೆ ಮಾಡಿ
ತೆಂಗಿನ ತೋಟಗಳಲ್ಲಿ ಗರಿಗಳು ಒಣಗುತ್ತಿವೆ ಹಾಗೂ ಕಾಯಿಗಳ ಇಳುವರಿ ಕಡಿಮೆಯಾಗುತ್ತಿರುವುದಕ್ಕೆ ಅಧಿಕ ಉಷ್ಣಾಂಶದಿಂದ ಹಾಗೂ ಮಳೆ ಕೊರತೆ ಹಾಗೂ ರುಗೂಸ್ ಬಿಳಿ ನೋಣಗಳಿಂದ ಈ ರೋಗ ಉಂಟಾಗುತ್ತಿದೆ. ಇದಕ್ಕೆ ನೀಮ್ ಆಯಿಲ್ ಲನ್ನು ಪವರ್ ಜೆಟ್ ಮೂಲಕ ಸಿಂಪಡಣೆ ಮಾಡಬೇಕು. ಪವರ್ ಸೆ ರೈತರಿಗೆ ಸಬ್ಸಿಡಿ ದರದಲ್ಲಿ ದೊರಕುತ್ತದೆ, ಅದನ್ನು ತೆಗೆದುಕೊಂಡು ತೆಂಗಿನ ಮರದ ಬುಡದಿಂದ ಮೇಲಿನವರೆಗೆ ಸಿಂಪಡಣೆ ಮಾಡಿದರೆ ಈ ರೋಗ ನಿವಾರಣೆಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಸುಧಾಕರ್ ತಿಳಿಸಿದರು.