ತಿಂಗಳಿಗಾಗುವಷ್ಟು ದಿನಸಿ ಸಂಗ್ರಹವಿದೆ

Ration Rce
Published on

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ಮುಂದಿನ ಒಂದು ತಿಂಗಳ ಕಾಲ ಆಗುವಷ್ಟು ಆಹಾರ ಪದಾರ್ಥಗಳ ಸಂಗ್ರಹವಿದೆ ಎಂದು ಎಪಿಎಂಸಿ ಯಶವಂತಪುರ ವಿಭಾಗದ ಜಂಟಿ ನಿರ್ದೇಶಕ ವಿ. ರಮೇಶ್ ತಿಳಿಸಿದ್ದಾರೆ.

ಈವರೆಗೆ 4.81 ಲಕ್ಷ ಕ್ವಿಂಟಾಲ್ ಆಹಾರ ಪದಾರ್ಥಗಳು ಸಂಗ್ರಹವಿದೆ. ನಿತ್ಯ ಸಾವಿರಾರು ಕ್ವಿಂಟಾಲ್ ಅಕ್ಕಿ, ಬೇಳೆಕಾಳು, ಈರುಳ್ಳಿ, ತರಕಾರಿ, ದಿನಸಿ ಮತ್ತಿತರರ ಆಹಾರ ಪದಾರ್ಥಗಳು ಬರುತ್ತಿವೆ. ಹೀಗಾಗಿ, ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.

ಲಾಕ್​ಡೌನ್ ಆರಂಭದಲ್ಲಿ ಮೂರು ದಿನಗಳ ಕಾಲ ಎಪಿಎಂಸಿ ಬಂದ್ ಆಗಿದ್ದರಿಂದ ಕಳೆದ ವಾರ ಆಹಾರ ಪದಾರ್ಥಗಳ ಕೊರತೆ ಇತ್ತು. ಇದೀಗ ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಆಹಾರ ಪದಾರ್ಥಗಳು ಸಂಗ್ರಹವಿದೆ. 2,46,660 ಕ್ವಿಂಟಾಲ್ ಅಕ್ಕಿ ದಾಸ್ತಾನಿದೆ. ಏ.1ರಿಂದ ಏ.4ರವರೆಗೆ ನಿತ್ಯ ಸಾವಿರಾರು ಕ್ವಿಂಟಾಲ್ ಅಕ್ಕಿ, ಬೇಳೆಕಾಳು, ದಿನಸಿ ಪದಾರ್ಥ ಬರುತ್ತಿವೆ ಎಂದರು.

ನಿತ್ಯ 10 ಸಾವಿರ ಕ್ವಿಂ. ಈರುಳ್ಳಿ ಸಾಕು: ಏ.1ರಿಂದ ಏ.4ರವರೆಗೆ 2.71 ಲಕ್ಷ ಚೀಲ ಈರುಳ್ಳಿ ಬಂದಿದೆ. ಸ್ಥಳೀಯವಾಗಿ ನಮಗೆ ಪ್ರತಿ ನಿತ್ಯ 20 ಸಾವಿರ ಚೀಲ ಈರುಳ್ಳಿ ಸಾಕಾಗುತ್ತದೆ. ಉಳಿದ ಈರುಳ್ಳಿಯನ್ನು ತಮಿಳುನಾಡಿಗೆ ಕಳುಹಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ತರಕಾರಿಗಳು ಸಂಗ್ರಹವಾಗಿದೆ. ನಿತ್ಯ ಶೇ.30 ತರಕಾರಿಗಳು ಉಳಿಯುತ್ತಿವೆ. ದಾಸನಪುರ ಮಾರುಕಟ್ಟೆಯಲ್ಲಿ ಖರೀದಿಸುವ ಆಹಾರ ಪದಾರ್ಥ ಗಳನ್ನು ಮಧ್ಯವರ್ತಿಗಳು 1 ರೂ. ನಿಂದ 2 ರೂ. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಜಾಸ್ತಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಇದೀಗ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿದೆ. ಪ್ರತಿ

ಕೆ.ಜಿ. ಪದಾರ್ಥಗಳ ಮೇಲೆ 1 ರೂ.ನಿಂದ 2 ರೂ.ವರೆಗೆ ಇಳಿಕೆಯಾಗಿದೆ. ಶೇ.90 ಸ್ಥಳೀಯವಾಗಿ ಈರುಳ್ಳಿ ದಾಸ್ತಾನು ಆಗುತ್ತಿದೆ. ಇಲ್ಲಿಂದ ಸೂಪರ್ ಮಾರ್ಕೆಟ್​ಗಳಿಗೆ ಹೆಚ್ಚು ಆಹಾರ ಪದಾರ್ಥಗಳು ರವಾನೆಯಾಗುತ್ತದೆ ಎಂದುವಿ. ರಮೇಶ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net