ಜೆಪಿ ನಗರದಲ್ಲಿ ಸಮಸ್ಯೆಗಳು ಹತ್ತಾರು

There are dozens of problems in JP Nagar
Published on

ಮೈಸೂರು: ಖಾಲಿ ನಿವೇಶನಗಳಲ್ಲಿ ಪೊದೆಗಳು ಬೆಳೆದು ಹಾವುಗಳ ಕಾಟದಿಂದ ಕಂಗಾಲಾಗಿರುವ ಜನರು, ಅಪಾರ್ಟ್‌ಮೆಂಟ್ ಯುಜಿಡಿಯಿಂದ ಸೃಷ್ಟಿಯಾಗಿರುವ ಸಮಸ್ಯೆ, ದಿನನಿತ್ಯ ನಡೆಯದ ತ್ಯಾಜ್ಯ ವಿಲೇವಾರಿ, ರಸ್ತೆಯನ್ನೇ ಒತ್ತುವರಿಮಾಡಿ ಶೆಡ್ ನಿರ್ಮಾಣ… ಹೀಗೆ ಹತ್ತು ಹಲವು ಸಮಸ್ಯೆಗಳು ಮಂಗಳವಾರ ಶಾಸಕ ಟಿ.ಎಸ್. ಶ್ರೀವತ್ಸ ಜೆಪಿ ನಗರದ ಓಂಕಾರ ಬಡಾವಣೆ ಹಾಗೂ ವರ್ತುಲ ರಸ್ತೆಯಲ್ಲಿ ಪಾದಯಾತ್ರೆ ಕೈಗೊಂಡ ಸಂದರ್ಭ ಅನಾವರಣಗೊಂಡಿತು.

ಜೆ.ಪಿ.ನಗರದ ಅಕ್ಕ ಮಹಾದೇವಿ ರಸ್ತೆಗೆ ಹೊಂದಿಕೊಂಡಂತೆ ಇರುವ ರಿಂಗ್ ರಸ್ತೆಯಿಂದ ಶಾಸಕರು ಪಾದಯಾತ್ರೆ ಪ್ರಾರಂಭಿಸಿದರು. ವರ್ತುಲ ರಸ್ತೆಯ ಅಲ್ಲಲ್ಲಿ ತ್ಯಾಜ್ಯಗಳು ಹರಡಿಕೊಂಡಿರುವುದನ್ನು ಕಂಡ ಶಾಸಕರು, ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಬಡಾವಣೆ ಹಾಗೂ ವರ್ತುಲ ರಸ್ತೆಯಲ್ಲಿ ಆಗುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಸ್ಥಳೀಯ ನಿವಾಸಿ ಗಳು ಶಾಸಕರ ಗಮನ ಸೆಳೆದರು.

ರಸ್ತೆ ಬದಿಯಲ್ಲಿ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಆದರೆ, ಪೌರ ಕಾರ್ಮಿಕರು ನಾಲ್ಕೈದು ತಿಂಗಳಿಗೊಮ್ಮೆ ತ್ಯಾಜ್ಯ ವಿಲೇವಾರಿ ಮಾಡಲು ಆಗಮಿಸುತ್ತಾರೆ. ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಕ್ಕೆ ವಾರಕ್ಕೆ ಎರಡು ದಿನ ಮಾತ್ರ ಪೌರ ಕಾರ್ಮಿಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸುವ ಕಾರ್ಯ ಆಗಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.

ವರ್ತುಲ ರಸ್ತೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿದ್ದು, ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಈ ಬಗ್ಗೆ ಮುಡಾ ಆಯುಕ್ತರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ ಶಾಸಕರು, ಒತ್ತುವರಿದಾರರಿಗೆ ತಕ್ಷಣ ನೋಟಿಸ್ ಜಾರಿಗೊಳಿಸಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಅಪಾರ್ಟ್‌ಮೆಂಟ್‌ನ ಯುಜಿಡಿ ಲೈನ್‌ನ ಸಂಪರ್ಕವನ್ನು ಎದುರುಗಡೆ ರಸ್ತೆಗೆ ಬಿಡದೆ ಹಿಂಭಾಗದ ರಸ್ತೆಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಯ ಕುರಿತು ಗಮನ ಸೆಳೆಯಲಾಯಿತು. ಸೆಟ್‌ಬ್ಯಾಕ್ ಬಿಡದೆ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದ್ದು, ಮುಡಾ ಅಧಿಕಾರಿಗಳು ಪರಿಶೀಲನೆ ನಡೆಸಿದ ಅನುಮೋದನೆ ನೀಡಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರವಾಗಿ ನಗರಪಾಲಿಕೆ ಹಾಗೂ ಮುಡಾ ಅಧಿಕಾರಿಗಳೊಂದಿಗೆ ಶಾಸಕರು ಚರ್ಚೆ ನಡೆಸಿದರು. ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾಖಲೆಗಳು, ಯಾವ ಕಾರಣಕ್ಕೆ ಹಿಂಭಾಗದ ರಸ್ತೆಗೆ ಯುಜಿಡಿ ಸಂಪರ್ಕ ನೀಡಲಾಗಿದೆ ಎಂಬ ಮಾಹಿತಿ, ಮೋರಿಗೆ ಹೊಂದಿಕೊಂಡಂತೆ ಕಟ್ಟಡವನ್ನು ಏತಕ್ಕೆ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ನೀಡುವಂತೆ ಮುಡಾ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ಬಡಾವಣೆಯಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ನೆಲಕ್ಕೆ ಒರಗುವ ಸಾಧ್ಯತೆ ಇದ್ದು, ಕೂಡಲೇ ಟ್ರಾನ್ಸ್‌ಫಾರ್ಮರ್ ಬದಲಿಸುವ ಕಾರ್ಯ ಆಗಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಬಡಾವಣೆಯಲ್ಲಿ ಸಾಕಷ್ಟು ಬಾರಿ ವಿದ್ಯುತ್ ಓವರ್‌ಲೋಡ್ ಉಂಟಾಗಿ ಗೃಹಪಯೋಗಿ ವಸ್ತುಗಳು ಸುಟ್ಟು ಹೋಗಿದ್ದು, ಟಿಸಿ ಬದಲಿಸಬೇಕು ಎಂದು ಮನವಿ ಮಾಡಲಾಯಿತು.

ಹಾವುಗಳಿಂದ ನಮ್ಮನ್ನು ರಕ್ಷಿಸಿ: ಜೆಪಿ ನಗರ ಹಾಗೂ ವರ್ತುಲ ರಸ್ತೆಯ ಸುತ್ತಮುತ್ತ ಹಾವುಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಹಾವುಗಳಿಂದ ನಮಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಶಾಸಕ ಟಿ.ಎಸ್. ಶ್ರೀವತ್ಸ ಅವರ ಗಮನ ಸೆಳೆದರು. ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕಸದ ರಾಶಿ ತುಂಬಿಕೊಂಡಿದೆ. ಇದರಿಂದ ಖಾಲಿ ನಿವೇಶನಗಳು ಹಾವುಗಳ ಆವಾಸ ಸ್ಥಾನವಾಗಿದೆ. ಆಗಿಂದಾಗೆ ನಿವೇಶಗಳನ್ನು ಶುಚಿಗೊಳಿಸುವ ಕಾರ್ಯ ಕೈಗೊಳ್ಳಬೇಕು. ಬಿಸಿಲು ಹೆಚ್ಚಾಗುತ್ತಿದ್ದಂತೆ ಹಾವುಗಳು ರಸ್ತೆಯಲ್ಲಿ ಹರಿದಾಡುತ್ತವೆ. ಇದರಿಂದ ಸಾರ್ವಜನಿಕರು ನೆಮ್ಮದಿಯಾಗಿ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಗರ ಪಾಲಿಕೆಯ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಭಿಯಾನ ಹಮ್ಮಿಕೊಳ್ಳಲಾಗುವುದು. ಖಾಲಿ ಜಾಗದಲ್ಲಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಇನ್ನು ಮುಂದೆ ತ್ಯಾಜ್ಯ ಬೀಳದಂತೆ ಹಾಗೂ ಗಿಡಗಂಟಿಗಳು ಬೆಳೆಯದಂತೆ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭ ನಗರಪಾಲಿಕೆ ಮಾಜಿ ಸದಸ್ಯೆ ಶಾಂತಮ್ಮ, ಬಿಜೆಪಿ ಮುಖಂಡರಾದ ಗೋಪಾಲರಾಜೇ ಅರಸ್, ಲಕ್ಷ್ಮೀ ಅರಸ್, ವಡಿವೇಲು, ಎಂ.ಪ್ರದೀಪ್ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net