ಸಾವಿನ ಹೆದ್ದಾರಿಗಳಿವೆ... ಎಚ್ಚರ!

1
ದೊಡ್ಡಬಳ್ಳಾಪುರ-ದಾಬಸ್ ಪೇಟೆ ಮಾರ್ಗದ ಸ್ಯಾಟಲೈಟ್ ರಿಂಗ್ ರೋಡ್
Published on

ವರ್ಷದಲ್ಲಿ 130ಕ್ಕೂ ಹೆಚ್ಚು ಜನ ಸಾವು- ದೊಡ್ಡಬಳ್ಳಾಪುರ ತಾಲೂಕು ಅಪಘಾತಗಳ ತವರು

ದೊಡ್ಡಬಳ್ಳಾಪುರ: ಹೋರಾಟಗಾರರ ನೆಲ, ರೇಷ್ಮೆೆನಗರಿ, ನೇಕಾರ ನಗರಿ ಎಂಬಿತ್ಯಾದಿ ಹೆಸರುಗಳಿಂದ ರಾಜ್ಯದಲ್ಲಿ ಹೆಸರುವಾಸಿಯಾಗಿರುವ ದೊಡ್ಡಬಳ್ಳಾಪುರ ತಾಲೂಕು ಇದೀಗ ಅಪಘಾತಗಳ ತವರೂರಾಗುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾದ, ತಾಲೂಕಿನ ಮೂಲಕ ಹಾದುಹೋಗಿರುವ ಹೊಸಕೋಟೆ-ದಾಬಸ್‌ಪೇಟೆ ಎಸ್.ಟಿ.ಆರ್.ಆರ್ ಹೆದ್ದಾರಿ ಮತ್ತು ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಗಳಲ್ಲಿ ನಿತ್ಯ ಅಪಘಾತಗಳಿಂದ ಸಾವು ನೋವು ಸಂಭವಿಸುತ್ತಿವೆ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಪ್ರಯಾಣಿಕರು ಸೇರಿ ಅನೇಕರು ಹೈವೇಗೆ ಬಲಿ ಆಗುತ್ತಿದ್ದಾರೆ.

ಸರ್ವಿಸ್ ರಸ್ತೆಗಳು ಇಲ್ಲವೇ ಇಲ್ಲ: ತಾಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಮತ್ತು ರಾಜ್ಯ ಅವೈಜ್ಞಾನಿಕ ಹೆದ್ದಾರಿಗಳು ಹೆಮ್ಮಾರಿಗಳಾಗಿ ಜನರ ಪ್ರಾಣ ಹಿಂಡುತ್ತಿವೆ. ವೇಗ ನಿಯಂತ್ರಣಕ್ಕೆ, ಅಪಘಾತ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ, ಬಹುತೇಕ ಕಡೆ ಸಮರ್ಪಕ ಸರ್ವೀಸ್ ರಸ್ತೆಗಳು ನಿರ್ಮಾಣ ಆಗಿಲ್ಲ. ಅನೇಕ ಕಡೆ ಮಾರ್ಗಸೂಚಿ ಫಲಕಗಳನ್ನೂ ಹಾಕಲಾಗಿಲ್ಲ. ಹೀಗೆ ಸೂಕ್ತ ಸರ್ವೀಸ್ ರಸ್ತೆ, ಮಾರ್ಗ ಫಲಕಗಳಿಲ್ಲದ ಹೆದ್ದಾರಿಗಳಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಸಿಗೆ ಹಿಡಿದ 350 ಮಂದಿ

2024 ಜನವರಿಯಿಂದ ಇಲ್ಲಿಯವರೆಗೆ ರಸ್ತೆ ಅಪಘಾತದಲ್ಲಿ 130ಕ್ಕೂ ಜನ ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಜನ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಇಷ್ಟೂ ಜನ ಗಾಯಗೊಂಡಿರುವುದು ಕೇವಲ ಎರಡು ಠಾಣಾ ವ್ಯಾಪ್ತಿಯಲ್ಲಿ. ಒಂದು ದೊಡ್ಡಬಳ್ಳಾಪುರ ನಗರ ಮತ್ತೊಂದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಬೆರಳಣಿಕೆಯಷ್ಟು ಪ್ರಕರಣಗಳನ್ನು ಹೊರತುಪಡಿಸಿ ಉಳಿಕೆ ಎಲ್ಲವೂ ಅವೈಜ್ಞಾನಿಕ ಹೆದ್ದಾರಿಗಳೇ ಕಾರಣವಾಗಿದೆ ಎನ್ನಲಾಗಿದೆ.

ಟ್ರಾಫಿಕ್ ಠಾಣೆ ಯಾವಾಗ?

ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ತಾಲೂಕುಗಳಿವೆ. ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದ ಮೂರು ತಾಲೂಕಿನಲ್ಲಿಯೂ ಸಂಚಾರಿ ಪೊಲೀಸ್ ಠಾಣೆಗಳಿವೆ. ಆದರೆ ದೊಡ್ಡಬಳ್ಳಾಪುರ ಎಲ್ಲ ದಿಕ್ಕುಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖವಾಗಿ ಏಷ್ಯಾದಲ್ಲಿಯೇ ಎರಡನೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಇರುವುದು ದೊಡ್ಡಬಳ್ಳಾಪುರದಲ್ಲಿ. ಅಲ್ಲದೆ ಇತ್ತೀಚೆಗೆ ಸ್ಥಾಪನೆಯಾಗುತ್ತಿರುವ ಫಾಕ್ಸ್ಕಾನ್ ಕಂಪನಿಯಿಂದಾಗಿ ಏಕಾಏಕಿ 50 ಸಾವಿರ ಮಂದಿ ಹೆಚ್ಚಾಗಿದ್ದಾರೆ. ಇವರೆಲ್ಲರೂ ದೊಡ್ಡಬಳ್ಳಾಪುರದ ರಸ್ತೆಗಳ ಮೂಲಕವೇ ಸಂಚರಿಸಬೇಕಾಗಿದೆ. ಅಲ್ಲದೆ ನಗರ ಮತ್ತು ಬಾಶೆಟ್ಟಿಹಳ್ಳಿ ಭಾಗದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಇದರಿಂದ ಸಹಜವಾಗಿ ಅಪಘಾತಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಸದ್ಯಕ್ಕೆ ಸಂಚಾರಿ ಪೊಲೀಸ್ ಠಾಣೆ ಅತ್ಯಗತ್ಯವಾಗಿದೆ.

ಬಜೆಟ್‌ನಲ್ಲಿಯೇ ಸಿಗ್ನಲ್ ಆಫ್

ನಗರಸಭೆಯಲ್ಲಿ ಮಂಡಿಸುವ ಬಜೆಟ್‌ಗಳಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನ ಅಳವಡಿಸಲು ಕಳೆದ ಮೂರ್ನಾಲ್ಕು ಬಜೆಟ್‌ಗಳಲ್ಲಿ ಲಕ್ಷ ಲಕ್ಷ ಹಣ ಮೀಸಲಿಡುವುದೆ ಕಾಯಕವಾಗಿದೆ. ಆದರೆ ಮೂರ್ನಾಲ್ಕು ವರ್ಷಗಳಾದರೂ ಒಂದೇ ಒಂದು ಸಿಗ್ನಲ್ ಆನ್ ಆಗಿಲ್ಲ. ಇದೂ ಕೂಡ ಅಪಘಾತಗಳಿಗೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಮೂಲಕ ಹಾದು ಹೋಗಿರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತದಲ್ಲಿನ ಸಾವು-ನೋವಿನ ಬಗ್ಗೆ ಅಂಕಿ ಅಂಶಗಳ ಸಮೇತ ಸರ್ಕಾರಕ್ಕೆ ಉತ್ತರ ಕೇಳಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಪಘಾತಗಳು, ಸಾವುಗಳು ಆಗಿದ್ದರೂ ಸರ್ಕಾರ ಏಕೆ ಕ್ರಮ ವಹಿಸಿಲ್ಲ? ದೊಡ್ಡಬಳ್ಳಾಪುರಕ್ಕೆ ಏಕೆ ಸಂಚಾರಿ ಪೊಲೀಸ್ ಠಾಣೆ ಕೊಟ್ಟಿಲ್ಲ? ಹೆದ್ದಾರಿಯಲ್ಲಿ ಟ್ರಾಮಾ ಸೆಂಟರ್ ಅನ್ನು ದೊಡ್ಡಬಳ್ಳಾಪುರಕ್ಕೇ ಕೊಡಬೇಕೆಂದು ಕೇಳಿದ್ದೇನೆ. ಈ ಬಗ್ಗೆ ಸದನದಲ್ಲಿ ಮಂಗಳವಾರ ಪ್ರಸ್ತಾಪ ಮಾಡುತ್ತೇನೆ. -ಧೀರಜ್ ಮುನಿರಾಜು ಶಾಸಕ, ದೊಡ್ಡಬಳ್ಳಾಪುರ ಟೋಲ್‌ನವರು ಕೇವಲ ಹಣ ಸಂಗ್ರಹಕ್ಕೆ ಸೀಮಿತವಾಗದೆ, ವಾಹನ ಸವಾರರ ಸುರಕ್ಷತೆಗೂ ಹೆಚ್ಚು ಒತ್ತು ನೀಡಬೇಕು. ಕಳೆದೊಂದು ವಾರದಲ್ಲಿ ಐದಾರು ಅಪಘಾತ ಪ್ರಕರಣಗಳಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತ ತಡೆಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದೀರಿ, ಅಪಘಾತ ವಲಯದಲ್ಲಿ ಆಂಬುಲೆನ್ಸ್ ಸೇವೆ ಕೂಡ ಸಮರ್ಪಕವಾಗಿ ಒದಗಿಸಿಲ್ಲ. ಕೂಡಲೇ ರಸ್ತೆ ಪರಿಶೀಲನೆ ನಡೆಸಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಟೋಲ್ ಸಂಗ್ರಹ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. -ರಾಜಘಟ್ಟ ರವಿ ಕರವೇ ರಾಜ್ಯ ಪ್ರಧಾನಕಾರ್ಯದರ್ಶಿ ಸ್ಯಾಟಲೇಟ್ ರಿಂಗ್ ರಸ್ತೆ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಾವರರ ವೇಗ ಮಿತಿ ಮೀರಿದೆ. ಎರಡು ಹೆದ್ದಾರಿಗಳಲ್ಲಿ ದಿನಂಪ್ರತಿ ವಾಹನಗಳ ಓಡಾಟ ಸಂಖ್ಯೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಫಾಕ್ಸ್ ಕಾನ್ ಕಂಪನಿಯಿಂದಾಗಿ 25 ಸಾವಿರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ. ಅಪಘಾತಗಳ ನಿಯಂತ್ರಣಕ್ಕಾಗಿ ರೆಡಾರ್ ಗನ್ ಮೂಲಕ ವೇಗ ಮಿತಿ ಪತ್ತೆ ಹಚ್ಚಿ ದಂಡ ಹಾಕಲಾಗುತ್ತಿದೆ. ಸಂಚಾರಿ ನಿಯಮಗಳ ಕುರಿತು, ವಿಮೆ ಮಾಡಿಸುವುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರಿ ಪೊಲೀಸ್ ಠಾಣೆಗಾಗಿ ಇಲಾಖೆಯಿಂದ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ನಮಗೆ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸಲು ಸಿಬ್ಬಂದಿಗಳ ಕೊರತೆ ಇದೆ. -ಸಾದಿಕ್ ಪಾಷಾ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net