

ಕ್ಯಾಲನೂರು: ಗ್ರಾಮೀಣಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದರೂ ಸಹ ರಸ್ತೆಗಳ ಸಮಸ್ಯೆ ಇನ್ನೂ ಜೀವಂತವಾಗಿದೆ.
ಕೋಲಾರ ತಾಲೂಕು ಕ್ಯಾಲನೂರು ಗ್ರಾಪಂ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಮಳೆ ಬಂದರೆ ಕೆಸರು ಗದ್ದೆಯಂತಾಗುವ, ಬಿಸಿಲು ಬಿದ್ದರೆ ಧೂಳಿನ ಮಜ್ಜನದಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದಾರಿ ತೋರಬೇಕಾಗಿದ್ದ ರಸ್ತೆಗಳೇ ಹದಗೆಟ್ಟಿದ್ದು, ಹಳ್ಳಿಗಳ ಜನರ ಬದುಕನ್ನು ದುಸ್ತರಗೊಳಿಸಿವೆ.
ಕ್ಯಾಲನೂರು ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸಲು ಯೋಜನೆಗಳಿಗೆ ಕೊರತೆ ಇಲ್ಲ. ಆದರೆ, ಯೋಜನೆಗಳು ವೈಾನಿಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಅಗತ್ಯ ಇರುವ ಕಡೆ ರಸ್ತೆ ದುರಸ್ತಿ, ಒಳ ಚರಂಡಿ ವ್ಯವಸ್ಥೆ ಕಲ್ಪಿಸುವುದಿಲ್ಲ. ಜನ, ಜಾನುವಾರು ಓಡಾಡುವ ಸ್ಥಳಗಳಲ್ಲಿ ಜನೋಪಯೋಗಿ ಕೆಲಸ ಮಾಡುವುದಿಲ್ಲ. ತೀರಾ ಸಮಸ್ಯೆ ಹದಗೆಟ್ಟಾಗ ಮಣ್ಣು ಸುರಿದು ಕೈತೊಳೆದುಕೊಳ್ಳುತ್ತಾರೆ. ಅದೂ ಸರಿಯಾಗಿ ಕಲ್ಲು, ಮರಳುಮಿಶ್ರಣ ಮಾಡದೆ ಬಿಡಲಾಗುತ್ತಿದೆ. ಇದರಿಂದ ಹಾಕಿದ ಜಲ್ಲಿಕಲ್ಲು&ಮಣ್ಣು ಕೆಲವೇ ದಿನಗಳಲ್ಲಿ ಕಿತ್ತು ಅಭಿವೃದ್ಧಿಯ ನೈಜ ಬಣ್ಣ ಬಯಲಾಗುವಂತೆ ಮಾಡುತ್ತದೆ.
ತಾಲೂಕು ವ್ಯಾಪ್ತಿಯ ಯಾವುದೇ ಗ್ರಾಮಕ್ಕೆ ಹೋಗಿ ನೋಡಿದರೂ, ಡಾಂಬರ್ ಹಾಕದ, ಗುಂಡಿ ಬಿದ್ದ, ಕಳಪೆ ಕಾಮಗಾರಿಯ ರಸ್ತೆಗಳೇ ಕಾಣಸಿಗುತ್ತವೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದು ತಿಳಿದಿದ್ದರೂ ಅವರದು ಜಾಣ ಕುರುಡು ವರ್ತನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಕ್ಯಾಲನೂರು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ.
ದ್ವಿಚಕ್ರ ಮತ್ತು ಸಣ್ಣ ವಾಹನಗಳು ಕೆಸರಿನಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಇನ್ನು ವೃದ್ಧರು ದ್ವಿಚಕ್ರವಾಹನದಲ್ಲಿ ಬಂದರೆ ಗುಂಡಿಗಳನ್ನು ದಾಟುವುದೇ ಒಂದು ದೊಡ್ಡ ಕೆಲಸವಾಗಿದೆ. ಇದೇರ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲಾ&ಕಾಲೇಜುಗಳಿಗೆ ಸಂಚರಿಸಬೇಕಿದ್ದು, ಆಂಬುಲೆನ್ಸ್ ಬಂದಾಗ ಪರಿಸ್ಥಿತಿ ಹೇಳತೀರದಾಗಿದೆ ಎಂದು ಗ್ರಾಮದ ಮಹೇಶ್ ಅಸಮಾಧಾನ ಹೊರ ಹಾಕಿದರು.
ಸಮಸ್ಯೆ ಕೇಂದ್ರಿತ ಗ್ರಾಮಗಳಲ್ಲಿ ಸಭೆ ಆಯೋಜಿಸಬೇಕು. ಊರಿಗೆ ಅಗತ್ಯ ಸೇವೆ ಒದಗಿಸಲು ರೂಪುರೇಷೆ ತಯಾರಿಸಬೇಕು. ಆದರೆ, ಒಂದೇ ಗ್ರಾಮಕ್ಕೆ ಅನುದಾನ ಪೂರೈಸುವಷ್ಟು ಸಂಪನ್ಮೂಲ ಗ್ರಾಮ ಪಂಚಾಯಿತಿಗಳಲ್ಲಿ ಇರುವುದಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಸಹಕಾರ ಪಡೆದರೆ ಜನೋಪಯೋಗಿ ಕಾಮಗಾರಿ ಕೈಗೊಳ್ಳಲು ಸಾಧ್ಯ | ಎನ್.ರಮೇಶ್, ಅಧ್ಯಕ್ಷ ಕ್ಯಾಲನೂರು ಗ್ರಾಮ ಪಂಚಾಯಿತಿ
ಚರಂಡಿ ವ್ಯವಸ್ಥೆಯೂ ಇಲ್ಲ! ಇದೇ ಮಾರ್ಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತದೆ. ಕೆಲವೆಡೆ ಸಿಸಿ ರಸ್ತೆ ನಿರ್ಮಿಸಿ, ನಡುವೆ ಮಣ್ಣಿನ ದಾರಿ ಹಾಗೇ ಬಿಟ್ಟಿದ್ದಾರೆ. ಕ್ಯಾಲನೂರು&ಪಡೆಗೆನೆಹಳ್ಳಿ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಅಗತ್ಯ ಇರುವ ಕಡೆ ಜಾಗ ಎತ್ತರಿಸಿಲ್ಲ. ಮಳೆಗೆ ಹೂಳು ಸೃಷ್ಟಿಯಾಗದಂತೆ ನೆಲಹಾಸುಗಟ್ಟಿಗೊಳಿಸಿಲ್ಲ. ಇಂತಹ ಕಡೆ ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಚರಂಡಿ ನೀರು ಹರಿಯದೆ ಮನೆಗಳ ಸುತ್ತ ನಿಂತು ಅನೈರ್ಮಲ್ಯ ನಿರ್ಮಾಣ ತಾಂಡವವಾಡುತ್ತಿದೆ.
ಹತ್ತಾರು ವರ್ಷಗಳಿಂದ ರಸ್ತೆ ನಿರ್ವಹಣೆ ಮಾಡಿಲ್ಲ. ಮಳೆಗಾಲದಲ್ಲಿ ಗ್ರಾಮದ ತುಂಬಾ ನೀರು ನಿಂತು ಕೊಚ್ಚೆ ಗುಂಡಿಯಂತಾಗುತ್ತದೆ. ಮನೆಯಿಂದ ವಾಹನ ಹೊರತರಲು ಆಗದ ದು@ಸ್ಥಿತಿ ನಿರ್ಮಾಣವಾಗಿದೆ. ಆಟೊ, ಟೆಂಪೊ, ಬೈಕ್ಗಳು ಕೆಸರಿನಲ್ಲಿ ಸಿಲುಕಿ ನಿಲ್ಲುವುದು ಇಲ್ಲಿ ಸಾಮಾನ್ಯ. ಪಂಚಾಯಿತಿಗಳು ಮಳೆಗಾಲಕ್ಕೂ ಮೊದಲು ಜನರಸಂಕಟ ನಿವಾರಿಸಲು ಕ್ರಮ ಕೈಗೊಳ್ಳಬೇಕು. | ಪ್ರಮೋದ್ ಕ್ಯಾಲನೂರು, ಗ್ರಾಮಸ್ಥ ಕೆಲವೆಡೆ ಸಿಮೆಂಟ್ ರಸ್ತೆ ಮತ್ತು ಮಣ್ಣಿನ ರಸ್ತೆಗಳನ್ನು ಅಡ್ಡಾದಿಡ್ಡಿ ನಿರ್ಮಿಸಲಾಗಿದೆ. ಇದರಿಂದ ಮಳೆ ನೀರಿನ ಜತೆಗೆ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಈ ಬಗ್ಗೆ ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. | ರಮೇಶ್, ತೇಪೆನೇಹಳ್ಳಿ ಪಡೆಗೆನಾಹಳ್ಳಿಯಿಂದ ಕೆಲ ಗ್ರಾಮಗಳ ರಸ್ತೆ ಇದ್ದರೂ ಗುಣಮಟ್ಟದಿಂದ ಕೂಡಿಲ್ಲ. ಹಾದಿಯ ನಡುವೆ ತಿಪ್ಪೆರಾಶಿ, ಕೊಳಚೆ ಸೇರಿ ಕೊಚ್ಚೆ ಗುಂಡಿಯಾಗಿ ಬದಲಾಗುತ್ತದೆ. ಇದರಿಂದ ರಸ್ತೆಯ ಓಡಾಡಲು ಕಷ್ಟ. ನೀರು ತುಂಬಿದ ಕೆಸರು ಗುಂಡಿಗಳು ಅಪಾಯಕ್ಕೂ ಆಹ್ವಾನನೀಡುತ್ತವೆ. | ಚನ್ನಿಪ್ಪ, ಗ್ರಾಮಸ್ಥ