

ಎನ್.ಮುನಿವೆಂಕಟೇಗೌಡ ಕೋಲಾರ
ಹೈನುಗಾರಿಕೆಯ ಜೀವನಾಧಾರವಾಗಿರುವ ಕೋಲಾರ ಜಿಲ್ಲೆಯಲ್ಲಿ ರಾಸುಗಳೇ ರೈತರ ಜೀವನಾಡಿಯಾಗಿವೆ. ಆದರೆ, ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸೇರಿ 338 ಹುದ್ದೆಗಳು ಖಾಲಿ ಇದ್ದು, ಪಶುಪಾಲಕರು ಖಾಸಗಿ ವೈದ್ಯರನ್ನು ಅವಲಂಬಿಸುವಂತಾಗಿದೆ.
ಜಿಲ್ಲಾ ಕೇಂದ್ರ ಸೇರಿ 6 ತಾಲೂಕುಗಳಲ್ಲಿನ ಆಸ್ಪತ್ರೆಗಳು, 26 ಹೋಬಳಿ ಕೇಂದ್ರಗಳಲ್ಲಿನ ಆಸ್ಪತ್ರೆಗಳು, 59 ಪಶು ಚಿಕಿತ್ಸಾಲಯಗಳು, 22 ಪ್ರಾಥಮಿಕ ಪಶು ಚಿಕಿತ್ಸಾಲಯಗಳಿದ್ದು, ಸರ್ಕಾರ ಸೃಷ್ಟಿಸಿರುವ 490 ಹುದ್ದೆಗಳ ಪೈಕಿ 152 ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, 338 ಹುದ್ದೆಗಳು ಖಾಲಿ ಇವೆ. ಜಿಲ್ಲಾಸ್ಪತ್ರೆಯ ಉಪ ನಿರ್ದೇಶಕ ಸೇರಿ 100 ವೈದ್ಯರ ಹುದ್ದೆಗೆ 64 ವೈದ್ಯರಿದ್ದು, ಇನ್ನು 36 ವೈದ್ಯರ ಹುದ್ದೆ ಖಾಲಿ ಇವೆ.
ಪ್ರಸ್ತುತ 21ನೇ ಜಾನುವಾರು ಗಣತಿ ನಡೆಯುತ್ತಿದ್ದು, 20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,09,642 ರಾಸುಗಳಿವೆ. 26,520 ಎಮ್ಮೆಗಳು, 4,83,892 ಕುರಿಗಳು, 93,713 ಮೇಕೆಗಳು, 5,292 ಹಂದಿಗಳು, 8,67,729 ಕೋಳಿಗಳಿವೆ. ಈ ಜಾನುವಾರು ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಸಿಬ್ಬಂದಿ ನೇಮಕವಾಗಬೇಕಿದೆ.
ಪರಿಹಾರದ ಮೊತ್ತ ಹೆಚ್ಚಿಸಲಿ
ರಾಸುಗಳು ಅಕಾಲಿಕವಾಗಿ ಮೃತಪಟ್ಟರೆ ಸರ್ಕಾರ 10 ಸಾವಿರ ರೂ. ಪರಿಹಾರ ನೀಡುತ್ತದೆ. ಕುರಿ ಮತ್ತು ಮೇಕೆಗೆ 5 ಸಾವಿರ ರೂ., ಚಿಕ್ಕ ಮರಿಗಳು ಮೃತಪಟ್ಟರೆ 3,500 ರೂ. ನೀಡಲಾಗುತ್ತಿದೆ. ಆದರೆ ಒಂದು ಸೀಮೆ ಹಸು 75 ಸಾವಿರದಿಂದ 80 ಸಾವಿರ ರೂ. ಬೆಲೆ ಬಾಳುತ್ತದೆ. ಕನಿಷ್ಠ 25 ರಿಂದ 50 ಸಾವಿರ ರೂ. ವರೆಗೂ ಪರಿಹಾರ ನೀಡಬೇಕು ಎಂಬುದು ಪಶುಪಾಲಕರ ಒತ್ತಾಯವಾಗಿದೆ. 2024ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮೃತಪಟ್ಟ 200 ಸಾವಿರಕ್ಕೂ ಹೆಚ್ಚಿನ ಕುರಿಗಳು ಮತ್ತು ಮೇಕೆಗಳಿಗೆ 1.12 ಕೋಟಿ ರೂ., 217 ರಾಸುಗಳಿಗೆ 21.70 ಲಕ್ಷ ರೂ. ಪರಿಹಾರ ಪಶುಪಾಲಕರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಿದೆ.
ರೋಗ ನಿಯಂತ್ರಣಕ್ಕೆ ಚುಚ್ಚುಮದ್ದು
ಜಿಲ್ಲೆಯಲ್ಲಿ 27,154 ಸಾಕು ನಾಯಿಗಳಿಗೆ ರೇಬಿಸ್ ರೋಗ ನಿಯಂತ್ರಣಕ್ಕೆ ಚುಚ್ಚು ಮದ್ದು ನೀಡಲಾಗಿದೆ. ಕುರಿ ಮತ್ತು ಮೇಕೆಗೆ ಪಿಪಿಆರ್ಎಸ್ ವೈರಸ್ ಹರಡದಂತೆ 3,14,900 ಚುಚ್ಚು ಮದ್ದು ನೀಡಲಾಗಿದೆ. ಕರುಳುಬೇನೆ ಹರಡದಂತೆ 5,77,500 ಚುಚ್ಚು ಮದ್ದನ್ನು ನೀಡಲಾಗಿದೆ. ಖಾಲಿ ಹುದ್ದೆ ಭರ್ತಿಯಾಗದರೆ ಇಂತಹ ಕಾರ್ಯಗಳಲ್ಲಿ ಶೇ.100 ಗುರಿ ಸಾಧಿಸಬಹುದು ಎಂಬುದು ಪಶು ಇಲಾಖೆ ಸಿಬ್ಬಂದಿ ಅನಿಸಕೆ.
"ಸಿಬ್ಬಂದಿ ಕೊರತೆಯ ನಡುವೆಯು ಜಿಲ್ಲೆಯಲ್ಲಿ 4,40,132 ದನಗಳಿಗೆ, 1,42,937 ಕರುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಕ್ಸಿನ್ ನೀಡಲಾಗಿದೆ. ಕಂದು ರೋಗ ನಿಯಂತ್ರಣಕ್ಕೆ 4 ತಿಂಗಳಿನಿಂದ 8 ತಿಂಗಳ ಕರುಗಳಿಗೆ 8,152 ಕರುಗಳಿಗೆ ವ್ಯಾಕ್ಸಿನ್ ಮಾಡಲಾಗಿದೆ. ಖಾಸಗಿ ವೈದ್ಯರ ಸಂಖ್ಯೆ ಕಡಿಮೆ ಇದ್ದು, ಪಶು ಇಲಾಖೆಯ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ."
-ಡಾ.ಜಿ.ಎಂ.ರಮೇಶ್
ಉಪನಿರ್ದೇಶಕ, ಪಶುಪಾಲನಾ ಇಲಾಖೆ, ಕೋಲಾರ
"ರಾಸುಗಳು ಮತ್ತು ಕುರಿ&ಮೇಕೆಗಳು ಮೃತಪಟ್ಟಾಗ ಸರ್ಕಾರ ನೀಡುವ ಪರಿಹಾರ ಸಾಲದು. ಅದನ್ನು ಹೆಚ್ಚಿಸಬೇಕು. ಈಗಿನ ಜಾನುವಾರು ಸಂಖ್ಯೆಗೆ ಅನುಗುಣವಾಗಿ ಪಶು ವೈದ್ಯರ ನೇಮಕ ಮತ್ತು ಸಿಬ್ಬಂದಿ ನೇಮಕ ಮಾಡುವ ಕೆಲಸ ಸರ್ಕಾರ ತುರ್ತಾಗಿ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಏಕೈಕ ಪ್ರಯೋಗಾಲಯ ಮಾತ್ರ ಇದ್ದು, ತಾಲೂಕು ಕೇಂದ್ರಗಳಲ್ಲಿ ಪ್ರಯೋಗಾಲಯ ಪ್ರಾರಂಭಿಸಬೇಕು."
-ಪಿ.ಆರ್. ಸೂರ್ಯನಾರಾಯಣ
ರಾಜ್ಯ ಕಾರ್ಯದರ್ಶಿ, ಪ್ರಾಂತ ರೈತ ಸಂಘ