ತೇರದಾಳ ಸೈನಿಕರನ್ನು ಹೊಂದಿರುವ ಪುಣ್ಯಭೂಮಿ

TDL NEWS 15-2
Published on

ತೇರದಾಳ: ಪ್ರೇಮಿಗಳ ದಿನಾಚರಣೆ ಬದಲು ಸೈನಿಕರ ದಿನವನ್ನು ಆಚರಿಸುವ ಮೂಲಕ ಪಟ್ಟಣದ ನೇಕಾರ ಕುಟುಂಬಗಳಿರುವ ಡಚ್ ಕಾಲನಿ ನಿವಾಸಿಗಳು ಫೆ.14 ಅನ್ನು ಸ್ಮರಣೀಯವಾಗಿಸಿದರು.

ಸ್ಥಳೀಯ ಗಜಾನನ ಯುವಕ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೇಶಪ್ರೇಮಿ ಕಾರ್ಯಕ್ರಮದಲ್ಲಿ ತೇರದಾಳ ಸೇರಿ ಜಮಖಂಡಿ, ಮಹಾಲಿಂಗಪುರ, ಗೋಲಬಾವಿ, ಬೆಳಗಾವಿ ಜಿಲ್ಲೆಯ ಶೇಗುಣಸಿ, ಕವಟಗೊಪ್ಪ, ಸಂಕ್ರಟ್ಟಿ, ಹಾರೂಗೇರಿ ಮತ್ತಿತರ ಕಡೆಯಿಂದ ಇಪ್ಪತ್ತಕ್ಕೂ ಅಧಿಕ ಹಾಲಿ, ನಿವೃತ್ತ ಸೈನಿಕರು ಡ್ರೇಸ್ ಧರಿಸಿ ಹಾಜರಿದ್ದು, ತಮ್ಮ ಅಮೂಲ್ಯ ಸಮಯವನ್ನು ಕಾಲನಿ ನೇಕಾರರೊಂದಿಗೆ ಹಂಚಿಕೊಂಡು ಖುಷಿಪಟ್ಟರು.
ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ನಿವೃತ್ತ ಕ್ಯಾಪ್ಟನ್ ಸುರೇಂದ್ರ ತಳವಾರ, ವಾಗ್ಮಿ ನಂದು ಗಾಯಕವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂದು ಗಾಯಕವಾಡ ಮಾತನಾಡಿ, ಬ್ರಿಟಿಷರು ಬಿಟ್ಟು ಹೋದ ವಾಲೆಂಟೈನ್ ದಿನದಂದು ದೇಶದಲ್ಲಿ ಪ್ರತಿದಿನಕ್ಕಿಂತಲೂ ಶೇ. 40 ರಷ್ಟು ಕಾಂಡಮ್ ಬಳಕೆ ಹೆಚ್ಚಾಗುವುದು ಖೇದಕರ. ಭಾರತೀಯರಿಗೆ ಕೇಕ್ ಸಂಸ್ಕೃತಿ ಅವಶ್ಯಕತೆಯಿಲ್ಲ, ತಾಯಿ ಹಾಕುವ ರೊಟ್ಟಿ ಬೇಕಿದೆ. ಸೈನಿಕರು ಖಾಸಗಿ ಬದುಕು, ಕುಟುಂಬವನ್ನು ಬಿಟ್ಟು ದೇಶಕ್ಕಾಗಿ ತ್ಯಾಗ, ಬಲಿದಾನಕ್ಕೆ ಅಣಿಯಾಗುತ್ತಾರೆ. ತೇರದಾಳ ಎರಡು ನೂರರಷ್ಟು ಸೈನಿಕರನ್ನು ಹೊಂದಿದ ಪುಣ್ಯಭೂಮಿ ಎಂದರು.

ಸೈನಿಕ ಸುರೇಂದ್ರ ತಳವಾರ ಮಾತನಾಡಿ, ಯೋಧರಿಗೆ ಕೊಡುವ ಸನ್ಮಾನ ದೇವರಿಗೆ ಅರ್ಪಿತವಾಗುತ್ತದೆ. ಮನೆಗೊಬ್ಬ ಸೈನಿಕನಾದರೆ ಉತ್ತಮ ಸಂಸ್ಕಾರ ಮತ್ತು ಶಿಸ್ತನ್ನು ನಾಡಿನೊಳಗಡೆ ತುಂಬಲು ಸಾಧ್ಯ ಎಂದರು.

ಸೈನಿಕರಾದ ಹವಾಲ್ದಾರ್ ಸಂಜೀವ ಬಾನೆ, ಶ್ರೀಶೈಲ ಹೊಸಪೇಟಿ, ಆನಂದ ನಾವಿ, ಗುರು ಬಡಿಗೇರ, ಮಹಾವೀರ ಸಿಂಗೆ, ಯಶವಂತ ಪಾತ್ರಾಳಿ, ಮಹಮ್ಮದ್ ಜಮಾದಾರ, ಬುಜಬಲಿ ಹರವಿ, ಪರಪ್ಪ ರಾಚಪ್ಪನವರ, ವಿದ್ಯಾಧರ ಜಮಖಂಡಿಮಠ, ಗುರುಸಿದ್ದ ಹನಗಂಡಿ, ರಾಕೇಶ ಪರಮಾನಟ್ಟಿ, ಸುರೇಂದ್ರ ಕೊಹಳ್ಳಿ, ಭರತೇಶ ಸವದತ್ತಿ, ಬಸು ಅಥಣಿ ಇತರರಿದ್ದರು. ಶಿಕ್ಷಕಿ ಜ್ಯೋತಿ ಬೀಳಗಿ, ಸೈನಿಕನ ತಾಯಿ ಭೀನಾ ರಜಪುತ ಅವರನ್ನು ಸನ್ಮಾನಿಸಲಾಯಿತು.

ವಿನಾಯಕ ಶೇಡಬಾಳ ಐಕ್ಯತೆ ಗೀತೆ ಹಾಡಿದರು. ಶಾಂತಕುಮಾರ ಹಜಾರೆ ನಿರೂಪಿಸಿದರು. ವಂದೆ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net