ಕರ್ತವ್ಯಲೋಪ ಎಸಗಿದವರ ವಿರುದ್ಧ ಶಿಸ್ತುಕ್ರಮ : ತೆಂಕಮಿಜಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ : ಕೋರಂ ಇಲ್ಲದ ಬಗ್ಗೆ ಆಕ್ಷೇಪ

14
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

9/11 ಸಮರ್ಪಕ ದಾಖಲಾತಿ ಇಲ್ಲದೆ ಸಾಲ ಡಿಲೀಟ್ ಮಾಡಿ ಕರ್ತವ್ಯ ಲೋಪ ಮಾಡಿದ ಆರೋಪಗಳು ಕೇಳಿಬರುತ್ತಿವೆ. ಇದರ ಬಗ್ಗೆ ಸೂಕ್ತ ತನಿಖೆಯಾಗಿ ಲೋಪವೆಸಗಿದ ಪಿಡಿಒ, ದ್ವಿತೀಯ ದರ್ಜೆ ಸಹಾಯಕರ ಮೇಲೆ ಕೈಗೊಳ್ಳಬೇಕೆಂದು ತೆಂಕಮಿಜಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಅಧ್ಯಕ್ಷೆ ಶಾಲಿನಿ ಕೆ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಂತೆಕಟ್ಟೆ ವಿವಿಧೋದ್ದೇಶ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ತೆಂಕಮಿಜಾರು ಗ್ರಾಮಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಅವ್ಯವಹಾರ ಆಗಿರುವುದು ಹೌದು. ಅದಕ್ಕೆ ಸಮರ್ಪಕ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಕೋರಂ ಇಲ್ಲದೆ ಸಭೆ ನಡೆಸುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೋರಂ ಆಗುವವರೆಗೆ ಸಭೆಯನ್ನು ಮುಂದೂಡಲಾಗಿತ್ತು. ಗಣಿ ಇಲಾಖೆಯವರು, ತಹಸೀಲ್ದಾರರು ಹಾಗೂ ಇತರ ಕೆಲ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ಅಸಹನೆ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ ಸುಮಾರು 15 ಸಾವಿರದಷ್ಟಿದ್ದು ಇಷ್ಟು ಜನರಿಗೆ ಒಂದೇ ಕ್ರೀಡಾಂಗಣವಿದ್ದು, ಅದು ಕೂಡಾ ಅಭಿವೃದ್ಧಿ ಮಾಡದೆ ಇರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ನಿವೇಶನರಹಿತರಿಗೆ ಸಮರ್ಪಕ ನಿವೇಶನಗಳನ್ನು ನೀಡದಿರುವ ಬಗ್ಗೆಯೂ, ಗ್ರಾಮ ವ್ಯಾಪ್ತಿಯ 94ಸಿ ಅರ್ಜಿಗಳ ವಿಲೇವಾರಿ ಆಗದಿರುವ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದರು.

ನೀರ್ಕೆರೆ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಸೇತುವೆ ಕುಸಿದರೆ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಕ್ಕೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಹಿರಿಯ ಕೃಷಿಕ ಅಲ್ಫೋನ್ಸ್ ಡಿಸೋಜ ಮಾತನಾಡಿ, ಉಡುಪಿ-ಕಾಸರಗೋಡು ವಿದ್ಯುತ್ ಸಂಪರ್ಕ ಟವರ್‌ಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿಕರು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ ಹಾಗೂ ನಾವು ಬೆಳೆದ ಕೃಷಿಯನ್ನು ಹಾನಿ ಮಾಡಿ ಈ ಟವರ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೆ ಕೃಷಿಕರ ಒಪ್ಪಿಗೆ ಇಲ್ಲ ಎಂದು ಕೃಷಿಕರು ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಡಿಸೋಜ ನೋಡಲ್ ಅಧಿಕಾರಿಯಾಗಿದ್ದರು. ಪಿಡಿಒ ರೋಹಿಣಿ ಬಿ., ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಬಂಗೇರಾ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಗ್ರಾಪಂ ಮಾಜಿ ಅಧ್ಯಕ್ಷ ಹಸನಬ್ಬ ಕೆ. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಡಿಯೋ ದೃಶ್ಯಾವಳಿಗೆ ದುಪ್ಪಟ್ಟು ಶುಲ್ಕ

ಈ ಹಿಂದೆ ಇಲಾಖಾ ಸೂಚನೆಗಳ ಪ್ರಕಾರ ಗ್ರಾಮಸಭೆಯ ಲೈವ್ ಪ್ರಸರಣ ಮಾಡಿದ್ದು, ಈ ಬಾರಿ ಮಾಡದಿರುವ ಬಗ್ಗೆ ಗ್ರಾಮಸ್ಥ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ವಿಡಿಯೋ ಚಿತ್ರೀಕರಣವನ್ನು ಮಾಹಿತಿ ಹಕ್ಕು ಅಡಿ ಕೇಳಿದಾಗ ಪೆನ್‌ಡ್ರೈವ್‌ನಲ್ಲಿ ಕಾಪಿ ಮಾಡಿ ಕೊಡಲು 500 ರೂ. ತೆಗೆದುಕೊಂಡು ಸುಲಿಗೆ ಮಾಡುತ್ತಿದ್ದೀರಿ ಎಂದಾಗ, ಇನ್ನು ಮುಂದೆ ನಿಯಮಾನುಸಾರವೇ ದರ ನಿಗದಿಪಡಿಸುವಂತೆ ನಿರ್ಣಯಿಸಲಾಯಿತು.

ಗಣಿಗಾರಿಕೆಗೆ ಸ್ಥಳೀಯ ಅನುಮತಿ ಇಲ್ಲ

ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ನಿರಕ್ಷೇಪಣಾ ಪತ್ರ ನೀಡಿಲ್ಲ. ತಹಸೀಲ್ದಾರರ ಮೂಲಕ ಪಡೆದಿದ್ದಾರೆ. ಎಲ್ಲಿಯೂ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆಗೆ ಪಂಚಾಯಿತಿ ಅವಕಾಶ ನೀಡದಂತೆ ನಿರ್ಣಯ ಕೈಗೊಳ್ಳಲಾಯಿತು. ಜನ ಸಾಮಾನ್ಯರು ಕರೆಂಟ್ ಸಂಪರ್ಕ ಕೇಳಿದಾಗ ಸಾವಿರ ದಾಖಲೆ ಕೇಳುತ್ತೀರಿ. ಗಣಿಗಾರಿಕೆಗೆ ಹೇಗೆ ವಿದ್ಯುತ್ ಸಂಪರ್ಕ ನೀಡಿದಿರಿ? ಎಂಬ ಗ್ರಾಮಸ್ಥರ ಪ್ರಶ್ನೆಗೆ ತಹಸೀಲ್ದಾರರು ನೀಡಿರುವ ನಿರಕ್ಷೇಪಣಾ ಪತ್ರದ ಆಧಾರದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net