ಕಳವಿಗೆ ಬಂದ ಮನೆಯಲ್ಲೇ ನಿದ್ರಿಸಿದ ಕಳ್ಳ

Theft
Published on

ಉಪ್ಪಿನಂಗಡಿ: ಕಳವುಗೈಯಲು ಮನೆಯೊಂದಕ್ಕೆ ನುಗ್ಗಿದ ಕಳ್ಳ ಅದೇ ಮನೆಯಲ್ಲಿ ಬೆಳಗ್ಗಿನವರೆಗೆ ಮಲಗಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಇಲ್ಲಿನ ದರ್ಶನ್ ಎಂಟರ್‌ಪ್ರೈಸಸ್ ಮಾಲೀಕ ಸುದರ್ಶನ್ ಅವರ ಮಾಳಿಗೆ ಮನೆಯ ಛಾವಣಿಯನ್ನೇರಿದ್ದ ಕಳ್ಳ ಹೆಂಚುಗಳನ್ನು ತೆಗೆದು, ನೆಲ ಮಹಡಿಯಲ್ಲಿದ್ದ ಕೋಣೆಯ ಟಿವಿ ಸ್ಟ್ಯಾಂಡ್ ಜಾಲಾಡಿ ಕಪಾಟುಗಳ ಕೀ ಗೊಂಚಲನ್ನು ತೆಗೆದುಕೊಂಡಿದ್ದ. ಬಳಿಕ ನಡುಕೋಣೆಯಲ್ಲಿದ್ದ ದಿವಾನದಲ್ಲಿ ಪವಡಿಸಿದ್ದಾನೆ. ನಿದ್ದೆಗೆ ಜಾರಿದ್ದ ಕಳ್ಳ ಮುಂಜಾನೆ ಆರು ಗಂಟೆ ಸುಮಾರಿಗೆ ಮನೆ ಯಜಮಾನನ ಬೆತ್ತದೇಟಿನ ಬಿಸಿಗೆ ಎಚ್ಚರಗೊಂಡು ಪೊಲೀಸ್ ವಶವಾಗಿದ್ದಾನೆ.

ಸುದರ್ಶನ್ ಮುಂಜಾನೆ ಎದ್ದಾಗ ನಡು ಕೋಣೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ನಿದ್ರಿಸುತ್ತಿರುವುದನ್ನು ಕಂಡು ದಿಗಿಲುಗೊಂಡಿದ್ದರು. ಎಲ್ಲ ಬಾಗಿಲುಗಳನ್ನು ಭದ್ರಪಡಿಸಿದ್ದರೂ ವ್ಯಕ್ತಿ ಒಳಗೆ ಹೇಗೆ ಪ್ರವೇಶಿಸಿದ ಎಂದು ಪರಿಶೀಲಿಸಿದಾಗ ಮಹಡಿ ಮೇಲಿನ ಛಾವಣಿಯ ಹೆಂಚು ತೆಗೆದಿರುವುದು ಕಂಡುಬಂತು. ಬಂದಾತ ಕಳ್ಳನೆಂದು ದೃಢಪಟ್ಟ ಬಳಿಕ ಆತನಿಗೆ ಎರಡೇಟು ನೀಡಿ ನಿದ್ರೆಯಿಂದ ಎಬ್ಬಿಸಿದಾಗ ಮನೆಯ ಬೀಗದ ಕೀ ಗಳು ಪತ್ತೆಯಾದವು.

2 ದಿನದ ಹಿಂದೆ ಮತ್ತೊಬ್ಬ ಸಿಕ್ಕಿಬಿದ್ದಿದ್ದ: 2 ದಿನಗಳ ಹಿಂದೆ ಸುದರ್ಶನ್ ಅವರ ದೈವದ ಗುಡಿಯೊಳಗೆ ಬೇರೊಬ್ಬ ಕಳ್ಳ ನುಗ್ಗಿದ್ದು, ಕದ್ದ ಹಣದೊಂದಿಗೆ ಪರಾರಿಯಾಗಲು ಆಗದೆ ಅಲ್ಲೇ ಸುತ್ತುತ್ತಿದ್ದ. ಬಳಿಕ ಆತನನ್ನು ಪೊಲೀಸರ ಕೈಗೆ ನೀಡಲಾಗಿತ್ತು.

ದೈವದ ಕಾರ್ಣಿಕ: ಎರಡೂ ಪ್ರಕರಣಗಳಲ್ಲಿ ಕಳ್ಳರು ಸುಲಲಿತವಾಗಿ ಸಿಕ್ಕಿಬಿದ್ದಿರುವುದು ಮನೆಯ ದೈವದ ಕಾರ್ಣಿಕವೆಂದೇ ಮನೆಯ ಯಜಮಾನ ಭಾವಿಸಿದ್ದಾರೆ. ಉದ್ಯಮಿ ಸುದರ್ಶನ್ ಅವರು ಅಪಾರ ದೈವ ಭಕ್ತರಾಗಿದ್ದು, ಮನೆತನದಲ್ಲಿ ಕಾರಣಿಕ ದೈವದ ಆರಾಧನೆ ನಿಯಮಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಹಡಿ ಛಾವಣಿಯಿಂದ ಕೆಳಗಿಳಿದ ಕಳ್ಳನಿಗೆ ನಡು ಕೋಣೆಯಿಂದ ಮನೆಯ ಹೊರಗಡೆ ಹೋಗಲು ಬಾಗಿಲಿಗೆ ಹಾಕಲಾದ ಚಿಲಕವೊಂದನ್ನು ಸರಿಸಿದರೆ ಸಾಕಿತ್ತು. ಆದರೂ ಮನೆಯ ಬೀಗದ ಕೀಯೊಂದಿಗೆ ಆತ ನಿದ್ರೆಗೆ ಜಾರಿರುವುದು ಅಚ್ಚರಿ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net