11 ಲಕ್ಷ ಎಗರಿಸಿ, ಮೋಜು ಮಸ್ತಿ ಮಾಡಿದ ಅಸಾಮಿ

9
Published on

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಬೈಪಾಸ್‌ನ ಪೂಜಮ್ಮ ದೇವಾಲಯ ಸಮೀಪದ ಮಂಜುನಾಥ್ ಸ್ಟೀಲ್ ಟ್ರೇಡರ್ಸ್ ಅಂಗಡಿಯಲ್ಲಿ 11 ಲಕ್ಷ ನಗದು ಕಳ್ಳತನ ಮಾಡಿದ್ದ ಅಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಪುಲವಾರಪಲ್ಲಿಯ ಪಿ.ಎಸ್.ಮಹೇಶ್ (34) ಆರೋಪಿ. ಚಾಲಕ ಹಾಗೂ ಮರಗೆಲಸ ವೃತ್ತಿಯನ್ನು ಕೈಗೊಳ್ಳುತ್ತಿದ್ದ. ಕಳೆದ ಡಿ.2 ರಂದು ರಾತ್ರಿ ವೇಳೆ ಅಂಗಡಿಯ ಚಾವಣಿಯ ತಗಡಿನ ಶೀಟ್ ಕಿತ್ತು, ಒಳಗೆ ಹೋಗಿದ್ದ, ಹಾಗೆಯೇ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದ. ಈಗ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಕಂಬಿ ಎಣಿಸುತ್ತಿದ್ದಾನೆ.

ಬಂಧಿತನದಿಂದ ಕಳವಿನ ಹಣದ ಪೈಕಿ 4,12,000 ರೂ ನಗದು, ಕದ್ದ ಹಣದಲ್ಲಿ ಖರೀದಿಸಿದ ವಿವೋ ಕಂಪೆನಿಯ ಎರಡು ಮೊಬೈಲ್ ಫೋನ್ ಗಳನ್ನು, ಇತ್ತೀಚೆಗೆ ಯಲಹಂಕ ನ್ಯೂಟೌನ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿಕೊಂಡು ಬಂದಿದ್ದ ಟಾಟಾ ಏಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈತನ ಮೇಲೆ ಯಲಹಂಕ, ಗುಡಿಬಂಡೆ, ಚಿಂತಾಮಣಿ, ಹೊಸಕೋಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಅಂತರ್ ಜಿಲ್ಲಾ ಈ ಕಳ್ಳನನ್ನು ಬಂಧಿಸಲು ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಮುರಳೀಧರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಪಿಎಸ್‌ಐ ಪುನೀತ್ ನಂಜರಾಯ್‌ರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಎಲ್.ನಾಗೇಶ್ ರಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net