

ಸವಣೂರ: ಗೋದಾಮು ನಿರ್ಮಾಣ ಕಾಮಗಾರಿಗೆ ಬಿಲ್ ಪಾವತಿ ಮಾಡಲು ಲಂಚ ಸ್ವೀಕರಿಸಿದ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಶೋಕ ಗೊಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಫಕೀರನಂದಿಹಳ್ಳಿ ಗ್ರಾಮದಲ್ಲಿ ಗುತ್ತಿಗೆದಾರ ದಾವಲ್ವುಲ್ಲಿಕ್ ಸಾಬ್ ಗೋದಾಮು ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸಿದ್ದರು. ಕಾಮಗಾರಿ ಬಿಲ್ 1.60 ಸಾವಿರ ಪಾವತಿಸಲು ಪಿಡಿಒ ಅಶೋಕ ಗೊಂದಿ 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 50 ಸಾವಿರ ರೂ.ಗೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಮೇ 12ರಂದು ಹುಬ್ಬಳ್ಳಿಯ ಗೋಕುಲ ಹೊಸ ಬಸ್ ನಿಲ್ದಾಣದ ಹೊಟೇಲೊಂದರಲ್ಲಿ 50 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪಿಡಿಒ ಅಶೋಕ ಗೊಂದಿ ಅವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಿ. ಮಧುಸೂದನ, ಪಿಎಸ್ಐ ಮಂಜುನಾಥ ಪಂಡಿತ, ಬಸವರಾಜ ಹಳಬಣ್ಣವರ ಇತರರು ಕಾರ್ಯಾಚರಣೆಯಲ್ಲಿದ್ದರು.