

ಶಿವಮೊಗ್ಗ: ಆರ್‌ಎಂಎಲ್‌ನಗರದಲ್ಲಿ ಮನೆ ಬಾಗಿಲಿನ ಇಂಟರ್‌ಲಾಕ್ ಮುರಿದು ಒಂದು ಲಕ್ಷ ರೂ. ಮೌಲ್ಯದ ಸೌದಿ ಅರೇಬಿಯಾದ ಕರೆನ್ಸಿ ನೋಟುಗಳನ್ನು ಕಳವು ಮಾಡಲಾಗಿದೆ. ವರ್ಷದ ಬಳಿಕ ಸೌದಿಯಿಂದ ಬಂದವರಿಗೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಆರ್‌ಎಂಎಲ್ ನಗರದ ಸಲ್ಮಾ ಖಾನಂ ಅವರ ಪತಿ ಸೌದಿ ಅರೇಬಿಯಾ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಸಲ್ಮಾ ಖಾನಂ ಅವರು ಕಳೆದ ವರ್ಷದ ಮೇ ತಿಂಗಳಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಮಂಗಳವಾರ (ಜೂ. 6) ಬೆಳಗ್ಗೆ ಆರ್‌ಎಂಎಲ್‌ನಗರದ ಮನೆಗೆ ಮರಳಿದಾಗ ಬಾಗಿಲಿನ ಇಂಟರ್‌ಲಾಕ್ ಮುರಿದಿರುವುದು ಬೆಳಕಿಗೆ ಬಂದಿದೆ.
ಮನೆಯ ಒಳಗೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಬೀರುವಿನಲ್ಲಿ ಇಟ್ಟಿದ್ದ ಸೌದಿ ಅರೇಬಿಯಾದ ಕರೆನ್ಸಿ ಮತ್ತು ಚಿನ್ನಾಭರಣ ನಾಪತ್ತೆಯಾಗಿವೆ. ಸೌದಿ ಅರೇಬಿಯಾ ಕರೆನ್ಸಿ 500 ರಿಯಾಲ್ ಮುಖಬೆಲೆಯ 9 ನೋಟುಗಳ ಕಳ್ಳತನವಾಗಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಮೌಲ್ಯ 1,03,500 ರೂ. ಇದ್ದು ಚಿನ್ನಾಭರಣ ಮತ್ತಿತರೆ ವಸ್ತುಗಳೂ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.