21 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

kote police station
ಶಿವಮೊಗ್ಗ ಕೋಟೆ ಠಾಣೆ
Published on

ಶಿವಮೊಗ್ಗ: ಗಾಂಧಿಬಜಾರ್‌ನ ಚಿನ್ನಾಭರಣದ ಅಂಗಡಿಗೆ ಬಂದಿದ್ದ ಮಹಿಳೆಯರಿಬ್ಬರು 21 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಸ್ಟಾಕ್ ಚೆಕ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯರು ಚಿನ್ನದ ಸರ ಕಳವು ಮಾಡಿರುವುದು ಸ್ಪಷ್ಟವಾಗಿದೆ.

ಗಾಂಧಿ ಬಜಾರ್‌ನ ಜುವೆಲ್ಲರಿ ಅಂಗಡಿಯೊಂದರಲ್ಲಿ ಚಿನ್ನದ ಸರ ಖರೀದಿಗೆ 60 ವರ್ಷ ಮತ್ತು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಬಂದಿದ್ದರು. ಅಂಗಡಿ ಮಾಲೀಕ ಲೋಕೇಶ್ ಅವರು ಮಹಿಳೆಯರಿಗೆ ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸುತ್ತಿದ್ದರು. ಈ ವೇಳೆ ಮತ್ತೊಬ್ಬ ಗ್ರಾಹಕರು ಬಂದಿದ್ದು ಮಾಲೀಕ ಲೋಕೇಶ್ ಅವರತ್ತ ಗಮನ ಹರಿಸಿದರು. ಈ ಸಂದರ್ಭ ಇಬ್ಬರು ಮಹಿಳೆಯರು ಚಿನ್ನದ ಸರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರ ಖರೀದಿಗೆ ಬಂದ ಮಹಿಳೆಯರು ಕೊನೆಗೆ ಮೂಗುತಿ ಖರೀದಿಸಿ ತೆರಳಿದ್ದರು.
ಎರಡು ದಿನದ ಬಳಿಕ ಅಂಗಡಿಯ ಸ್ಟಾಕ್ ಚೆಕ್ ವೇಳೆ ಟ್ರೇನಲ್ಲಿ ಚಿನ್ನದ ಸರ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸಿಸಿಟಿವಿ ಪರಿಶೀಲಿಸಿದಾಗ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 1.50 ಲಕ್ಷ ರೂ. ಮೌಲ್ಯದ 21.830 ಗ್ರಾಂ ತೂಕದ ಬಂಗಾರದ ಸರ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಜುವೆಲ್ಲರಿ ಶಾಪ್‌ನ ಮಾಲೀಕ ಲೋಕೇಶ್ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net