

ಹೊಳಲ್ಕೆರೆ: ತಾಲೂಕಿನ ತಾಳಕಟ್ಟ ಗ್ರಾಮದ ಕರಿಯಮ್ಮ ದೇವಿ ದೇವಾಲಯದ ಮುಂಭಾಗದಲ್ಲಿನ ಮಾತಂಗೆಮ್ಮ ದೇವಿ ದೇಗುಲದ ಕಾಣಿಕೆ ಹುಂಡಿಯನ್ನು ಭಾನುವಾರ ರಾತ್ರಿ ಕಳವು ಮಾಡಲಾಗಿದೆ.
ನಾಲ್ಕು ಜನರ ಗುಂಪು ರಾತ್ರಿ 12.40ಕ್ಕೆ ದೇವಾಲಯದ ಬಳಿ ಆಗಮಿಸಿದ್ದು 15 ನಿಮಿಷಗಳ ಕಾಲ ದೇವಾಲಯದ ಸುತ್ತಲೂ ಸುತ್ತಾಡಿದ್ದಾರೆ. ಓರ್ವ ವ್ಯಕ್ತಿ ದೇಗುಲದ ಬೀಗ ಮುರಿದು, ಒಳ ನುಗ್ಗಿ ಹುಂಡಿ ಹೊತ್ತು ಹೊರಗೆ ತಂದು, ಮರೆಯಾಗಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳ್ಳರು ದೇವಾಲಯದಿಂದ 200 ಮೀಟರ್ ದೂರದ ತೋಟವೊಂದರಲ್ಲಿರುವ ಆಂಜನೇಯ ಸ್ವಾಮಿ ದೇಗುಲದ ಬಳಿ ಹುಂಡಿ ಹೊಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಕಳೆದ ಆರೇಳು ತಿಂಗಳಿಂದ ಹುಂಡಿ ಹಣ ತೆಗೆದಿರಲಿಲ್ಲ. ಒಂದೂವರೆ ಲಕ್ಷ ರೂ. ಸಂಗ್ರಹವಾಗಿರಬಹುದೆಂದು ಗುಡಿ ಗೌಡರು ಅಂದಾಜಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.