

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮನೆಗಳ್ಳತನಕ್ಕೆ ಅಡ್ಡಿಯಾದಳು ಎಂಬ ಕಾರಣಕ್ಕೆ ಆಕೆಯನ್ನೇ ಹತ್ಯೆ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ನಗರದ ಗಣೇಶಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗಣೇಶಪುರ ಲಕ್ಷ್ಮೀ ನಗರದ ಅಂಜನಾ ಎ. ದಡಿಕರ (54) ಕೊಲೆಯಾದ ಮಹಿಳೆ. ಮನೆಗಳ್ಳತನಕ್ಕೆ ಯತ್ನಿಸಿದ್ದಾಗ ಅಡ್ಡಿ ಪಡಿಸಿದ್ದಕ್ಕೆ ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿದ್ದಾರೆ.
ಒಂದೇ ದಿನ ಮೂರು ಕಡೆ ಕಳ್ಳತನ: ಮಹಾನಗರದಲ್ಲಿ ಏ.21ರಂದು ರಾತ್ರಿ ಮಾರುತಿ ನಗರದ ರಾಜೇಶ್ವರಿ ಬಸವರಾಜ ಪಾಟೀಲ ಎಂಬುವವರ ಮನೆ ಬೀಗ ಮುರಿದು 1.28 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಮಾರ್ಕಂಡೆಯ ನಗರದ ದತ್ತಾತ್ರೇಯ ಪಾಟೀಲ ಎಂಬುವವರ ಬೈಕ್ ಕಳ್ಳತನ ಹಾಗೂ ತಾಲೂಕಿನ ಸುಳೇಭಾವಿ ಗ್ರಾಮದ ದೀಪಕ ಹಂಪನ್ನವರ ಎಂಬುವವರ ಮನೆಯ ಬೀಗ ಮುರಿದು 44,800ರೂ. ಮೌಲ್ಯದ 8 ಗ್ರಾಂ ಚಿನ್ನಾಭರಣ, 320 ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ.
40ಕ್ಕೂ ಅಧಿಕ ಕಳ್ಳತನ ಪ್ರಕರಣ ದಾಖಲು: ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಕ್ಯಾಂಪ್, ಮಾಳಮಾರುತಿ, ಮಾರಿಹಾಳ, ಎಪಿಎಂಸಿ, ಮಾರ್ಕೆಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆ, ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ, ಕೇವಲ 20 ದಿನಗಳಲ್ಲಿ 40ಕ್ಕೂ ಅಧಿಕ ಕಳ್ಳತನ ಪ್ರಕರಣ ದಾಖಲಾಗಿವೆ. ಕೆಲವು ಕಡೆ ಮನೆಗಳ್ಳತನಕ್ಕೆ ಅಡ್ಡಿಯಾದವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣಗಳು ದಾಖಲಾಗುತ್ತಿದ್ದು ಪೊಲೀಸರು ಕಳ್ಳರ ಪತ್ತೆ ಹಚ್ಚುವ ಕೆಲಸ ಮಾಡುತ್ತಿಲ್ಲ. ದೂರು ನೀಡಿದರೂ ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗಣೇಶಪುರದ ಲಕ್ಷ್ಮೀ ನಗರದ ಮನೆಯೊಂದರಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಲೆಯಾಗಿದ್ದು, ಮೈಮೇಲಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ನಗರದಲ್ಲಿ ಕಳ್ಳತನ ಪ್ರಕರಣಗಳ ತಡೆಗಟ್ಟಲು ಪ್ರತ್ಯೇಕ ತಂಡ ರಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. -ನಿರಂಜನರಾಜ್ ಅರಸ್, ಡಿಸಿಪಿ