

ಜಗಳೂರು: ಕುರುಬ ಸೇರಿ ಇತರೆ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬುಧವಾರ ನಗರದಲ್ಲಿ ಎಲ್.ಜಿ. ಹಾವನೂರು ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಅವರಿಗೆ ಮನವಿ ಸಲ್ಲಿಸಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸಿಎಂ ಮತ್ತು ಸಚಿವರ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಮಹಾತ್ಮಗಾಂಧಿ ಹಳೆ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿತು.
ಈ ವೇಳೆ ಸಮಿತಿ ಗೌರವಾಧ್ಯಕ್ಷ ಗೌಡಗೊಂಡನಹಳ್ಳಿ ಸತೀಶ್ ಮಾತನಾಡಿ, ಪರಿಶಿಷ್ಟ ಪಂಗಡವು ಬುಡಕಟ್ಟು ಸಮುದಾಯಕ್ಕೆ ಸೇರಿದ್ದು, ಜತೆಗೆ ಸಮಾಜದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಈ ಮೊದಲು ಕೇವಲ ಶೇ.3 ರಷ್ಟು ಮೀಸಲಾತಿ ಕೊಡಲಾಗುತ್ತಿತ್ತು. ಆದರೆ ಎಲ್.ಜಿ. ಹಾವನೂರು ವರದಿಯ ನಂತರ ಶೇ.7.5 ರಷ್ಟು ಮೀಸಲಾತಿ ಕೊಡುವುದಾಗಿ ಹೇಳಿದ್ದ ಸರ್ಕಾರ ಈವರೆಗೂ ಕಾರ್ಯಗತಗೊಳಿಸಿಲ್ಲ. ಇದರ ನಡುವೆ ಕುರುಬ ಸಮುದಾಯ ಮತ್ತು ಇತರೆ ಜಾತಿಗಳನ್ನು ಎಸ್ಟಿ ಸೇರಿಸಲು ಸಿದ್ಧತೆ ನಡೆಸಿರುವುದು ಖಂಡನೀಯ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಲಿದೆ. ಸಿಎಂ ಈ ನಿರ್ಧಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಭೈರನಾಯಕನಹಳ್ಳಿ ರಾಜು ಮಾತನಾಡಿ, ರಾಜ್ಯದಲ್ಲಿ ಎಸ್ಟಿ ಜನಸಂಖ್ಯೆ ಹೆಚ್ಚಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಆರ್ಥಿಕ ಬಡತನದಿಂದ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಅರಿತಿರುವ ಸಿಎಂ ಸಿದ್ದರಾಮಯ್ಯನವರು ಕುರುಬರನ್ನು ನಮ್ಮೊಂದಿಗೆ ಸೇರಿಸಲು ಮುಂದಾಗಿರುವುದು ಎಷ್ಟು ಸರಿ? ಇರುವ ಮೀಸಲಾತಿ ಸಾಕಾಗುತ್ತಿಲ್ಲ. ಇನ್ನಷ್ಟು ಜಾತಿಗಳನ್ನು ಸೇರಿಸಿದರೆ ನಾವು ಎಲ್ಲಿಗೆ ಹೋಗಬೇಕು. ಹಾಗೇನಾದರೂ ಸೇರಿಸಬೇಕು ಎಂದು ಹಠಕ್ಕೆ ಬಿದ್ದರೆ ನಮ್ಮ ಸಂಪೂರ್ಣ ಮೀಸಲಾತಿಯನ್ನು ತೆಗೆದು ಬಿಡಿ ಎಂದರು.
ಯಾವುದೇ ಕಾರಣಕ್ಕೂ ಬೇರೆ ಸಮುದಾಯಗಳನ್ನು ಎಸ್ಟಿಗೆ ಸೇರಿಸುವುದು ಬೇಡ. ಇದರ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿ, ಇಲ್ಲವಾದ್ದಲ್ಲಿ ಇಡೀ ರಾಜ್ಯವೇ ಹೋರಾಟಕ್ಕೆ ಧುಮುಕಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಯರಲಕಟ್ಟೆ ಕೆಂಚಪ್ಪ, ಪ್ರಧಾನ ಕಾರ್ಯದರ್ಶಿ ಪಾಲನಾಯಕನಕೋಟೆ ತಿಪ್ಪೇಶ್, ಕಾರ್ಯದರ್ಶಿ ಕಸವನಹಳ್ಳಿ ಮಲ್ಲೇಶ್, ಖಿಲಾಕಣಕುಪ್ಪೆ ಆನಂದ, ಸಿ.ಎಂ. ಹೊಳೆ ಶರಣಪ್ಪ, ಮಡ್ರಳ್ಳಿ ತಿಪ್ಪಣ್ಣ, ಸಿ.ಎಂ. ಹೊಳೆ ಚಿರಂಜೀವಿ, ತಮಲೇಹಳ್ಳಿ ತಿಪ್ಪೇಶ್, ಲಿಂಗಣ್ಣನಹಳ್ಳಿ ವೀರೇಶ್, ಬೊಮ್ಮ ತಮಲೇಹಳ್ಳಿ, ಎಂ.ಸಿ. ಪ್ರಕಾಶ್ ಬೊಮ್ಮಕ್ಕನಹಳ್ಳಿ, ಸಿ.ಎಚ್. ಅಜಯ್ ಗೌಡಗೊಂಡನಹಳ್ಳಿ, ಶಿವು ತಮಲೇಹಳ್ಳಿ, ದುರುಗಪ್ಪ ಮತ್ತಿತರರಿದ್ದರು.