ಮೂಲ್ಕಿ ಅಕ್ಕಸಾಲಿಗರ ಕೇರಿ ಮಾರಿಗುಡಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು

Gold Theft
Published on

ಮೂಲ್ಕಿ: ಅಕ್ಕಸಾಲಿಗರ ಕೇರಿ ಬಳಿಯ ಪುರಾತನ ಮಾರಿಯಮ್ಮ ದೇವಸ್ಥಾನ, ಮೂಕಾಂಬಿಕಾ ಮಂದಿರದಲ್ಲಿ ಭಾನುವಾರ ರಾತ್ರಿ 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ನಡೆದಿದೆ.

ಮಾರಿಗುಡಿ ದೇವಸ್ಥಾನಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಗುಡಿಯೊಳಗಿನ ಮೂರು ಬೀಗ ಹಾಗೂ ಕಬ್ಬಿಣದ ಸರಪಳಿ ತುಂಡರಿಸಿ ದೇವಿಯ ಚಿನ್ನಾಭರಣ ಕಳವು ಮಾಡಿದ್ದಾರೆ. ದೇವಸ್ಥಾನದ ಒಳಗಿನ ಗುಡಿಯಲ್ಲಿದ್ದ ಮಾರಿಯಮ್ಮನ ಬಂಗಾರದ ಎರಡು ಜೊತೆ ಕಿವಿಯೋಲೆ, ಮೂಗುತಿ, ಕರಿಮಣಿ, ಬೆಳ್ಳಿಯ 3 ಮುಖವಾಡ ಹಾಗೂ ಕಾಣಿಕೆ ಡಬ್ಬಿ, ಸಾನದ ಸೊತ್ತು ಕಳ್ಳತನ ಮಾಡಲಾಗಿದೆ.

ದೇವರ ಕಾಣಿಕೆ ಡಬ್ಬಿಯಲ್ಲಿ ಹಿಂದಿನ ದಿನ ಹಣ ತೆಗೆದ ಕಾರಣ ಖಾಲಿಯಾಗಿದ್ದು, ಡಬ್ಬಿಯನ್ನು ಕಳ್ಳರು ಕೊಂಡು ಹೋಗಿದ್ದಾರೆ. ಮಾರಿಗುಡಿ ಹಿಂಭಾಗದಲ್ಲಿ ಬಾಳೆಗಿಡವನ್ನು ಕತ್ತರಿಸಿದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಸಮೀಪದಲ್ಲಿರುವ ಕೆಳಗಿನಮನೆ ರಘುವೀರ ಕೋಟ್ಯಾನ್ ಎಂಬುವರ ಮೂಕಾಂಬಿಕಾ ಮಂದಿರದಲ್ಲಿ ಕಳ್ಳತನ ನಡೆಸಿದ್ದು, ಬೆಳ್ಳಿಯ ಸತ್ತಿಗೆ, ಬಂಗಾರದ ಸರ ಹಾಗೂ ಬೆಳ್ಳಿಯ ಮೂರು ಸರ ಕಳವಾಗಿದೆ. ಮೂಲ್ಕಿ ಪರಿಸರದಲ್ಲಿ ಪ್ರತಿನಿತ್ಯ ಕಳ್ಳತನ ಪ್ರಕರಣ ನಡೆಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ. ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net