

ಮೂಲ್ಕಿ: ಪರಿಸರದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಡೆದ ಹಲವು ಕಳವು ಪ್ರಕರಣದಲ್ಲಿ ಭಾಗಿಗಳಾದ ಧಾರವಾಡ ಜನ್ನತ್ ನಗರ ನಿವಾಸಿ, ಪ್ರಸ್ತುತ ಉಡುಪಿ ಇಂದ್ರಾಳಿ ದುರ್ಗಾನಗರದಲ್ಲಿ ವಾಸವಾಗಿದ್ದ ರಾಜೇಶ್ ನಾಯ್ಕ(42) ಯಾನೆ ರಾಜ ಪಾಮಡಿ ಮತ್ತು ಆತನ ಪತಿ ಪದ್ಮಾ ಪಾಮಡಿ(37) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 62 ಗ್ರಾಂ ಚಿನ್ನಾಭರಣ, 2.5 ಕೆ.ಜಿ ಬೆಳ್ಳಿ ಸಾಮಗ್ರಿ ಸಹಿತ ಒಟ್ಟು 3.98 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲ್ಕಿ ಕಾರ್ನಾಡು ರಸ್ತೆಯ ಹಸನಬ್ಬ, ಮೂಲ್ಕಿ ಬಸ್ ನಿಲ್ದಾಣ ಬಳಿಯ ಸೋಮಸುಂದರ್ ಅವರ ಮನೆ, ಅಕ್ಕಸಾಲಿಗರ ಕೇರಿಯ ಪುರಾತನ ಮಾರಿಯಮ್ಮ ದೇವಸ್ಥಾನ ಮತ್ತು ಮೂಕಾಂಬಿಕಾ ಮಂದಿರ, ಮೂಲ್ಕಿ ಚರಂತಿ ಪೇಟೆಯ ಪ್ರಕಾಶ್ ಜುವೆಲ್ಲರಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು,
ಆರೋಪಿಗಳು ಇಂದ್ರಾಳಿಯಲ್ಲಿರುವ ರಾಜೇಶ್ ನಾಯ್ಕನ ತಂದೆಯ ಮನೆಯಲ್ಲಿ ವಾಸವಿದ್ದು, ಮೂಲ್ಕಿ ಪರಿಸರಕ್ಕೆ ಆಗಮಿಸಿ ಕಳ್ಳತನ ನಡೆಸಲು ಸ್ಥಳ ಗುರುತಿಸಿ ರಾತ್ರಿ ಕೃತ್ಯ ನಡೆಸಿ ಧಾರವಾಡಕ್ಕೆ ತೆರಳುತ್ತಿದ್ದರು. ಕೆಲವು ದಿನಗಳ ಬಳಿಕ ಮತ್ತೆ ಮರಳಿ ಕೃತ್ಯ ಮುಂದುವರಿಸುತ್ತಿದ್ದರು. ಮೂಲ್ಕಿಯಲ್ಲಿ ಲಭಿಸಿದ ಸಿಸಿ ಟಿವಿ ಫೂಟೇಜ್ ಕಳ್ಳರನ್ನು ಪತ್ತೆಹಚ್ಚಲು ಬಹಳ ಸಹಕಾರಿಯಾಯಿತು ಎಂದು ಸಹಾಯಕ ಪೊಲೀಸ್ ಆಯುಕ್ತ ಬೆಳ್ಳಿಯಪ್ಪ ವಿಜಯವಾಣಿಗೆ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ನಿರ್ದೇಶನದಲ್ಲಿ ಉಪ ಆಯುಕ್ತರಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ಸಹಾಯಕ ಆಯುಕ್ತ ಬೆಳ್ಳಿಯಪ್ಪ ಮುಂದಾಳತ್ವದಲ್ಲಿ ಮೂಲ್ಕಿ ಠಾಣಾ ನಿರೀಕ್ಷಕ ಕುಸುಮಾಧರ ಕೆ., ಉಪ ನಿರೀಕ್ಷಕರಾದ ದೇಜಪ್ಪ, ವಿನಾಯಕ ತೋರಗಲ್, ಎಎಸ್‌ಐಗಳಾದ ಚಂದ್ರಶೇಖರ, ಅಶೋಕ್ ಸುದರ್ಶನ್ ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.