ಕಟ್‌ಬೇಲ್ತೂರು ದೈವಸ್ಥಾನದಲ್ಲಿ ಕಳವು

theft
Published on

ಕುಂದಾಪುರ: ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದೆ.

ದೈವಸ್ಥಾನದ ಬೀಗ ಒಡೆದು ಒಳಪ್ರವೇಶಿಸಿದ ಕಳ್ಳ ಕಾಣಿಗೆ ಡಬ್ಬಿ ಒಡೆದು ನಗದು ದೋಚಿ, ಅಲ್ಲೇ ಸಮೀಪದಲ್ಲಿರುವ ಇನ್ನೊಂದು ಡಬ್ಬಿಯನ್ನೂ ಕೊಂಡೊಯ್ದಿದ್ದಾನೆ. ದೈವಸ್ಥಾನದ ಅನತಿ ದೂರದಲ್ಲಿರುವ ರೈಲ್ವೆ ರಸ್ತೆ ಸಮೀಪ ಕಾಣಿಕೆ ಡಬ್ಬಿ, ಚಿಲ್ಲರೆ ಹಣ ಹಾಗೂ ಕೃತ್ಯಕ್ಕೆ ಬಳಸಿರುವ ಕಬ್ಬಿಣದ ಸಲಾಕೆಗಳನ್ನು ಬಿಟ್ಟು ಪರಾರಿಯಾಗಿದ್ದಾನೆ.

ಕಳ್ಳನ ಚಲನವಲನ ದೈವಸ್ಥಾನದಲ್ಲಿ ಅಳವಡಿಸಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳ ದೈವಸ್ಥಾನ ಒಳಪ್ರವೇಶಿಸುವಾಗ ಕೈಯಲ್ಲಿದ್ದ ಕೊಡೆ ಮುಖಕ್ಕೆ ಅಡ್ಡಲಾಗಿ ಹಿಡಿದುಕೊಂಡಿದ್ದಾನೆ. ಕಬ್ಬಿಣದ ರಾಡ್‌ನಿಂದ ಕಾಣಿಕೆ ಡಬ್ಬಿ ಒಡೆಯುವ ಸಂದರ್ಭ ಆತನ ಮುಖಚಹರೆ ಪತ್ತೆಯಾಗಿದೆ.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಙರು ಆಗಮಿಸಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ರಾಜ್‌ಕುಮಾರ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿಸಿ ಟಿವಿಯ ದೃಶ್ಯಾವಳಿಗಳನ್ನು ಕಲೆಹಾಕಿ ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net